ಸಾರಾಂಶ
ಹಾನಗಲ್ಲ: ರಂಗಭೂಮಿ ಕಾಲಕಾಲಕ್ಕೆ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ. ಸಿನಿಮಾ, ಸೀರಿಯಲ್, ಸಾಮಾಜಿಕ ಜಾಲತಾಣ ಘಟ್ಟಗಳ ನಂತರ ಇದೀಗ ಕೃತ್ರಿಮ ಬುದ್ಧಿಮತ್ತೆಯ ಸವಾಲನ್ನು ಎದುರಿಸಬೇಕಾದ ಅನಿವಾರ್ಯತೆಯೂ ರಂಗಭೂಮಿಗೆ ಇದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಹೇಳಿದರು.
ಶೇಷಗಿರಿಯಲ್ಲಿ ಶ್ರೀ ಗಜಾನನ ಯುವಕ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ರಂಗಶಂಕರ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಂಗಭೂಮಿ ಎಲ್ಲ ಸಾಮಾಜಿಕ ಸತ್ಯ ಸತ್ವಗಳನ್ನು ಸಹೃದಯರಿಗೆ ಮುಟ್ಟಿಸುವ ಅತ್ಯಂತ ಹೃದ್ಯ ಮಾಧ್ಯಮವಾಗಿದೆ. ಹೊಸ ಪೀಳಿಗೆ ರಂಗಭೂಮಿ ಚಟುವಟಿಕೆಯನ್ನು ರೂಢಿಸಿಕೊಂಡು ಕೊಡುಗೆ ನೀಡುವಂತಾಗಬೇಕು. ಆದರೆ ರಂಗಭೂಮಿ ಜನತೆಯ ಇಷ್ಟದ ಪ್ರಕಾರವಾಗಿ ಎಂದೂ ಸೋಲದ್ದು. ಶೇಷಗಿರಿ ಕಲಾ ತಂಡ ಎಲ್ಲ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಂತಿದೆ. ಇದನ್ನು ಎದುರಿಸಿ ಗೆಲ್ಲುತ್ತಿದೆ ಎಂದರು.ಅಧ್ಯಕ್ಷತೆವಹಿಸಿ ಧಾರವಾಡ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಬಿ.ವೈ. ಬಂಡಿವಡ್ಡರ, ನಾಡಿನ ರಂಗಭೂಮಿಗೆ ಶೇಷಗಿರಿಯ ಕೊಡುಗೆ ಅಪಾರ. ಇದರ ಹಿಂದಿನ ಬೆಳಕು ಮತ್ತು ಶಕ್ತಿ ಹಿರಿಯ ರಾಜಕಾರಣಿ ಸಿ.ಎಂ. ಉದಾಸಿ ಅವರನ್ನು ಸ್ಮರಿಸಲೇಬೇಕು. ಒಂದು ಹಳ್ಳಿಯಲ್ಲಿನ ರಂಗ ಪ್ರೀತಿಯ ಯುವಕರಿಗೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಅತ್ಯಂತ ಪ್ರೀತಿಯಿಂದ ಒದಗಿಸಿದ ಪ್ರತಿಫಲವೇ ಈಗಿನ ಶೇಷಗಿರಿ ರಂಗ ಚಟುವಟಿಕೆಯಾಗಿದೆ. ಇಲ್ಲಿನ ಕಾರ್ಮಿಕರು ರಂಗವನ್ನು ಕಟ್ಟಿ ಬೆಳೆಸಿದ ಪರಿಯನ್ನು ಇಡೀ ನಾಡು ನೋಡಿ ಕಲಿಯುವಂತಿದೆ. ಸಮಾಜದ ಉನ್ನತಿಗೆ ಕಟ್ಟಿ ಬೆಳೆಸಿದ ಈ ರಂಗಭೂಮಿ ರಾಜ್ಯಕ್ಕೆ ಮಾದರಿಯದುದು ಎಂದರು.
ಮೂವರು ರಂಗಕರ್ಮಿಗಳಾದ ರೇಣುಕಾ ಫಕ್ಕೀರಪ್ಪ ಛಲವಾದಿ (ಬೀದಿ ನಾಟಕ) ಕಲಬುರ್ಗಿಯ ಎಲ್.ಬಿ. ಹರಿಕೃಷ್ಣ ಹಾಗೂ ಬಳ್ಳಾರಿಯ ವೈ. ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.ಸಾಹಿತಿ ಸತೀಶ ಕುಲಕರ್ಣಿ, ಶಿವಕುಮಾರ ಅಪ್ಪಾಜಿ, ಕೆ.ಆರ್. ಹಿರೇಮಠ, ಅನಿತಾ ಮಂಜುನಾಥ, ಪ್ರಭು ಗುರಪ್ಪನವರ, ಶಂಕರಣ್ಣ ಗುರಪ್ಪನವರ, ಎಸ್.ಆರ್. ಹಿರೇಮಠ, ಪೃಥ್ವಿರಾಜ ಬೆಟಗೇರಿ, ರಾಜೇಂದ್ರ ಹೆಗಡೆ, ಅನಿತಾ ಹರನಗಿರಿ ಮುಂತಾದವರಿದ್ದರು.
ಆರಂಭದಲ್ಲಿ ಜಮೀರ ಪಠಾಣ ಸ್ವಾಗತಿಸಿದರು. ಸಿದ್ಧಪ್ಪ ಕೊಂಡೊಜಿ ಕಾರ್ಯಕ್ರಮ ನಿರೂಪಿಸಿದರು. ಸಿದ್ಧಪ್ಪ ರೊಟ್ಟಿ ವಂದಿಸಿದರು. ಕೊನೆಗೆ ರಂಗಶಂಕರ ಕಲಾವಿದರಿಂದ ಸುಡಗಾಡು ಸಂಘ ನಾಟಕ ಪ್ರದರ್ಶನ ಜರುಗಿತು.