ಜನಸ್ಪಂದನದಲ್ಲಿ ಡಿಸಿ ಎದುರೇ ವಿಷ ಸೇವನೆಗೆ ಯತ್ನಿಸಿದ ಮಹಿಳೆ

| Published : Jun 30 2024, 12:45 AM IST

ಜನಸ್ಪಂದನದಲ್ಲಿ ಡಿಸಿ ಎದುರೇ ವಿಷ ಸೇವನೆಗೆ ಯತ್ನಿಸಿದ ಮಹಿಳೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸರಕೋಡು ಗ್ರಾಮದ ಸೋಮಶೇಖರಯ್ಯ ಕುಟುಂಬದವರು ಗ್ರಾಪಂ ಶೌಚಾಲಯ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿಲ್ಲ.

ಹಗರಿಬೊಮ್ಮನಹಳ್ಳಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ ಎದುರಿನಲ್ಲೇ ಮಹಿಳೆಯೊಬ್ಬರು ಶೌಚಾಲಯ ವಿವಾದಕ್ಕೆ ಸಂಬಂಧಿಸಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ.

ತಾಲೂಕಿನ ಬಸರಕೋಡು ಗ್ರಾಮದ ಸೋಮಶೇಖರಯ್ಯ ಕುಟುಂಬದವರು ಗ್ರಾಪಂ ಶೌಚಾಲಯ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿಲ್ಲ. ವಿವಾದಿತ ಸ್ಥಳದಲ್ಲಿ ಮನೆ ಕಟ್ಟಲು ಸಂಬಂಧಿಗಳಿಗೆ ಪರವಾನಗಿ ನೀಡಿ ಗ್ರಾಪಂನವರು ನಮ್ಮನ್ನು ತೀವ್ರ ನೋಯಿಸಿದ್ದಾರೆ ಎಂದು ಕುಟುಂಬದ ಯಜಮಾನಿ ಗೌರಮ್ಮ ದೂರಿದ್ದಾರೆ.

ಈ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಬನ್ನಿಗೋಳ ಪಿಡಿಒ ನಮ್ಮ ಎದುರಾಳಿಗಳಿಗೆ ಮನೆಕಟ್ಟಲು ಪರವಾನಗಿ ನೀಡಿದ್ದಾರೆ. ನಾವು ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದಕ್ಕೆ ಬೆಂಬಲಿಸಿದಕ್ಕಾಗಿ ನಮಗೆ ಈ ಶಿಕ್ಷೆಯಾಗುತ್ತಿದೆ. ಈ ವಿಷಯ ಬಗೆಹರಿಸಿ ಎಂದು ಶಾಸಕರ ಬಳಿ ಹೋದರೂ ನಮಗೆ ಪರಿಹಾರ ಸಿಕ್ಕಿಲ್ಲ ಎಂದು ಡಿಸಿ ಎದುರು ಅಳಲು ತೋಡಿಕೊಂಡರು.

ಗೌರಮ್ಮ ಡಿಸಿ ಮುಂದೆ ವಿಷ ಸೇವನೆಗೆ ಮುಂದಾದಾಗ ಸಿಪಿಐ ವಿಕಾಸ್ ಪಿ.ಲಮಾಣಿ, ಪಿಎಸ್‌ಐ ಬಸವರಾಜ ಅಡವಿಬಾವಿ ಬಾಟಲಿ ಕಸಿದರು. ಕೂಡಲೇ ಇದನ್ನು ಬಗೆಹರಿಸಿ ಎಂದು ತಾಪಂ ಇಒಗೆ ಡಿಸಿ ತಿಳಿಸಿದರು.ಡಬಲ್ ಟ್ಯಾಕ್ಸ್:ಪಟ್ಟಣದ ಪುರಸಭೆಯಲ್ಲಿ ಆಸ್ತಿಗಳಿಗೆ ಡಬಲ್ ಟ್ಯಾಕ್ಸ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ, ಪುರಸಭೆ ಸದಸ್ಯರು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಆಸ್ತಿಗಳಿಗೆ ರಾಜ್ಯದ ಯಾವುದೇ ತಾಲೂಕಿನಲ್ಲೂ ಇಲ್ಲದಷ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಈ ಕುರಿತಂತೆ ಖುದ್ದು ಜಿಲ್ಲಾಧಿಕಾರಿ ಕಚೇರಿಗೆ ಪುರಸಭೆ ಸದಸ್ಯರು ನಿಯೋಗ ತೆರಳಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಮರಿರಾಮಣ್ಣ, ಮಾಜಿ ಸದಸ್ಯ ಡಿಶ್ ಮಂಜುನಾಥ ಬೇಸರ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಈ ಕುರಿತಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದರು.ಪುರಸಭೆ ವ್ಯಾಪ್ತಿಯ ೭ ಸ್ಮಶಾನಗಳಿಗೆ ವಿಶೇಷ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಎಂ.ಬಿ. ಕಾಲನಿಯ ನಿವೇಶನಗಳ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಿ ಎಂದು ಶಾಸಕ ನೇಮರಾಜ ನಾಯ್ಕ ಡಿಸಿಗೆ ಸೂಚಿಸಿದರು.ಪಟ್ಟಣದಿಂದ ಹೊಸಪೇಟೆ ಜಿಲ್ಲಾಸ್ಪತ್ರೆಗೆ ಹೋಗಲು ಉಚಿತ ಆ್ಯಂಬುಲೆನ್ಸ್ ಸೇವೆ ಇದ್ದರೂ ಪಟ್ಟಣದ ಆ್ಯಂಬುಲೆನ್ಸ್‌ನವರು ₹೯೦೦ ಕೇಳುತ್ತಾರೆ ಎಂದು ಕರವೇ ತಾಲೂಕು ಅಧ್ಯಕ್ಷ ನಾಣಿಕೇರಿ ಭರಮಜ್ಜ ನಾಯಕ ಡಿಸಿ ಬಳಿ ದೂರಿದರು. ಬಳಿಕ ಜಿಲ್ಲಾಧಿಕಾರಿ ತಾಲೂಕು ವೈದ್ಯಾಧಿಕಾರಿ ಡಾ.ಶಿವರಾಜ್‌ಗೆ ಈ ದೂರಿನ ಮಾಹಿತಿ ನೀಡಿ ಉಚಿತ ಸೇವೆ ಕಲ್ಪಿಸಿ ಎಂದು ತಿಳಿಸಿದರು.ತಾಲೂಕಿನ ರಾಮೇಶ್ವರಬಂಡಿ ಗ್ರಾಮದವರು ಆದರ್ಶ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಕೂಡಲೇ ಆರಂಭಿಸಿ ಎಂದು ಗ್ರಾಮದ ಬಸವನಗೌಡ, ಹನುಮರೆಡ್ಡಿ, ಕರಿಬಸಪ್ಪ, ಷಣ್ಮುಖಪ್ಪ, ಮೂರ್ತಿ ಪೂಜಾರ್ ಒತ್ತಾಯಿಸಿದರು.ತಾಲೂಕಿನ ವಿವಿಧ ಗ್ರಾಮಸ್ಥರು ಸ್ಮಶಾನ ಒತ್ತುವರಿ ತೆರವು, ಬಂಡಿದಾರಿ, ನಿವೇಶನ ಸಮಸ್ಯೆ ಸೇರಿ ೨೦೦ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವು.ಕಾರ್ಯಕ್ರಮದಲ್ಲಿ ಸಿಇಒ ಸದಾಶಿವ ಪ್ರಭು, ತಹಸೀಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ, ತಾಪಂ ಇಒ ಡಾ.ಜಿ.ಪರಮೇಶ್ವರ, ಬಿಇಒ ಮೈಲೇಶ್ ಬೇವೂರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಎಚ್.ಹುಲ್ಲಾಳ, ಜೆಸ್ಕಾಂ ಇಇ ತೇಜಾನಾಯ್ಕ, ಲೋಕೋಪಯಾಗಿ ಇಲಾಖೆಯ ಸಹಾಯಕ ನಿರ್ದೇಶಕ ಪುರುಷೋತ್ತಮ, ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.