ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ: ಮಂಜುನಾಥ

| Published : Jun 30 2024, 12:45 AM IST

ಸಾರಾಂಶ

ಸೈದಾಪುರ ಪಟ್ಟಣದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ತಾಲೂಕು ಯೋಜನಾಧಿಕಾರಿ ಮಂಜುನಾಥ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಪ್ರತಿಯೊಬ್ಬರು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ ಸಲಹೆ ನೀಡಿದರು.

ಸಮೀಪದ ಸೈದಾಪುರ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾತೋಶ್ರೀ ಹೇಮಾವತಿ ವಿರೇಂದ್ರ ಹೆಗ್ಡೆ ಅವರ ಆಶಯದಂತೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಕುಟುಂಬದಲ್ಲಿ ತಾಯಿ ಆರೋಗ್ಯವಾಗಿದ್ದರೆ ಆ ಮನೆಯ ಎಲ್ಲ ಸದಸ್ಯರು ಆರೋಗ್ಯವಾಗಿರುತ್ತಾರೆ ಎಂದರು.

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಉತ್ಪನ್ನಗಳನ್ನು ಸೇವಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಯೋಜನೆ ವತಿಯಿಂದ ಆರೋಗ್ಯ ರಕ್ಷಾ ಮತ್ತು ಸಂಪೂರ್ಣ ಸುರಕ್ಷಾ ನೋಂದಣಿ ಮಾಡಿದ್ದು, ಕಾಯಿಲೆ ಬಂದಾಗ ಅದರ ಬಳಕೆಯನ್ನು ಸಹ ಮಾಡಿಕೊಳ್ಳುವುದು ಎಂದರು.

ಡಾ. ರಾಜೇಶ್ವರಿ ಮತ್ತು ಸಿರಿ ಮಿಲೆಟ್ ಯಾದಗಿರಿ ಮೇಲ್ವಿಚಾರಕ ನಾಗೇಶ ಮಾತನಾಡಿದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಕವಿತಾ ಮಿರಿಯಾಲ, ಒಕ್ಕೂಟ ಅಧ್ಯಕ್ಷೆ ಕಮಲಾ ಎಂ. ಕುಲಕರ್ಣಿ, ಸಿರಿ ಮಿಲೆಟ್ ಮೇಲ್ವಿಚಾರಕ ನಾಗೇಶ, ತುಕಾರಾಂ, ವಲಯ ಮೇಲ್ಚಾರಕಿ ರಂಗಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕೆ. ಲಕ್ಷ್ಮಿದೇವಿ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಯೋಜನೆಯ ಸೇವಾ ಪ್ರತಿನಿಧಿಗಳು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.