ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯಲ್ಲಿ 3 ವಾರಗಳ ಪರ್ಯಂತ ಆಯೋಜಿಸುತ್ತಿರುವ ಆಟಿದ ತುಳು ಪರ್ಬ ಎಂಬ ಬಹುಮುಖಿ ಪ್ರಾದೇಶಿಕ ಸಂಸ್ಕೃತಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಕುಲಪತಿ ಡಾ. ಶರತ್ ಕೆ. ರಾವ್ ಅವರು ನಿಸರ್ಗದ ಫಲವಂತಿಕೆಯನ್ನು ಬಿಂಬಿಸುವ ತೆಂಗಿನ ಸಿರಿಯನ್ನು ಅರಳಿಸುವ ಮೂಲಕ ಈ ಉತ್ಸವವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಡಾ. ಎಚ್. ಎಸ್. ಬಲ್ಲಾಳ್, ಉನ್ನತ ಶಿಕ್ಷಣ ಸಂಸ್ಥೆ ಮಾಹೆಯಲ್ಲಿ ಆಟಿದ ತುಳು ಪರ್ಬವನ್ನು ಆಯೋಜಿಸುವ ಮೂಲಕ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತಿದೆ. ನಾವು ವಿಶ್ವಮಟ್ಟಕ್ಕೆ ಹೆಮ್ಮರವಾಗಿ ಬೆಳೆದರೂ ನಮ್ಮ ಬೇರುಗಳನ್ನು ಮರೆಯುಲಾರೆವು ಎಂಬುದಕ್ಕೆ ಈ ಕಾರ್ಯಕ್ರಮ ದೃಷ್ಟಾಂತವಾಗಿದೆ ಎಂದು ಹೇಳಿದರು.
ಡಾ. ಶರತ್ ಕೆ. ರಾವ್ ಅವರು, ಆಟಿದ ತುಳು ಪರ್ಬವನ್ನು ಆಯೋಜಿಸುವ ಮೂಲಕ ಮಾಹೆಯು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶ್ವವೇ ಗಮನಿಸುವ ಕೆಲಸ ಮಾಡುತ್ತಿದೆ. ಈ ವಿಶಿಷ್ಟ ಕಾರ್ಯಕ್ರಮವು ಇಲ್ಲಿನ ದೇಶವಿದೇಶದ ತುಳುವೇತರರಿಗೆ ತುಳು ಸಂಸ್ಕೃತಿಯ ಮಹತ್ತ್ವವನ್ನು ಪರಿಚಯಿಸುತ್ತದೆ ಎಂದರು.ಸಹಕುಲಪತಿ ಮೇ.ಜ. (ಡಾ.) ಮ್ಯಾಥ್ಯೂಸ್ ಜೇಕಬ್, ಡಾ. ಕರುಣಾಕರ ಎ. ಕೋಟೆಗಾರ್, ಡಾ. ದಿಲೀಪ್ ಜಿ. ನಾಯಕ್, ಕರ್ನಲ್ (ಡಾ.) ಸುಧೀಂದ್ರ, ಡಾ. ಗಿರಿಧರ ಕಿಣಿ, ಕುಲಸಚಿವರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ವೇಣುಗೋಪಾಲ್ ಉಪಸ್ಥಿತರಿದ್ದರು.ಡಾ. ಬಲ್ಲಾಳ್ ಅವರು ಮಾನವಸಂಪನ್ಮೂಲ ವಿಭಾಗದ ನಿರ್ದೇಶಕ ಸತೀಶ್ ಪೈ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಭರತ್ ಕುಮಾರ್ ಎಚ್. ಅವರಿಗೆ ವೀಳ್ಯ ನೀಡುವ ಮೂಲಕ ಕಾರ್ಯಕ್ರಮ ಸರಣಿಯನ್ನು ಮುನ್ನಡೆಸುವ ಹೊಣೆ ವಹಿಸಿದರು. ಸಂಯೋಜನಾ ಸಮಿತಿಯ ಸಂಯೋಜಕ ಡಾ. ಶೋಭಾ ಕಾಮತ್ ಸ್ವಾಗತಿಸಿದರು. ಅಂತರ್‌ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ ಸಂಯೋಜಕ ಪ್ರೊ. ಪ್ರವೀಣ್ ಶೆಟ್ಟಿ ಪ್ರಸ್ತಾವನೆಗೈದರು, ನಿತೇಶ್ ಶೆಟ್ಟಿ ನಿರೂಪಿಸಿದರು.
ತಿಂಗಳಿಡೀ ತುಳುಮಯವಾಗಲಿರುವ ಮಾಹೆ: ಪ್ರತಿವರ್ಷ ಮಾಹೆಯಲ್ಲಿ ‘ಆಟಿದ ತುಳು ಪರ್ಬ’ವನ್ನು ಆಚರಿಸಲಾಗುತ್ತಿದ್ದು, ಈ ಸಲ ಜು. 16ರಿಂದ ಆ. 8ರವರೆಗೆ ಆಯೋಜಿಸಲಾಗಿದೆ. ಮಣಿಪಾಲ ಕ್ಯಾಂಪಸ್ ಮಾತ್ರವಲ್ಲದೆ, ಮಂಗಳೂರು ಮಾಹೆ ಕ್ಯಾಂಪಸ್ ಮತ್ತು ಕಟೀಲು ಸೇರಿದಂತೆ ವಿವಿಧ ಮಾಹೆ ಘಟಕ ಸಂಸ್ಥೆಗಳಲ್ಲಿ ಈ ಉತ್ಸವವನ್ನು ನಡೆಸಲಾಗುತ್ತಿದೆ. ಪ್ರಧಾನವಾಗಿ ತುಳುನಾಡಿನ ಸಮೃದ್ಧ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ನೆನಪಿಸುವುದು ಈ ಕಾರ್ಯಕ್ರಮ ಸರಣಿಯ ಉದ್ದೇಶವಾಗಿದೆ. ಕಲಾ ಪ್ರದರ್ಶನಗಳು, ವಿಚಾರ ಸಂಕಿರಣಗಳು, ಪರಿಚಯಾತ್ಮಕ ಗೋಷ್ಠಿಗಳು, ಸ್ಥಳೀಯ ಆಹಾರ ಪದ್ಧತಿಯ ಕುರಿತ ಕಲಾಪಗಳು, ತುಳು ಚಲನಚಿತ್ರ ಪ್ರದರ್ಶನ, ತುಳು ಯಕ್ಷಗಾನ ಪ್ರದರ್ಶನ, ತುಳು ನಾಟಕ ಪ್ರದರ್ಶನಗಳು ಆಯೋಜನೆಗೊಂಡಿವೆ.