ಸೆಪ್ಟೆಂಬರ್‌ 19ರಿಂದ ಬೀದರ್‌ನಲ್ಲಿ ಎಬಿವಿಪಿಯಿಂದ ರಥಯಾತ್ರೆ ಆರಂಭ: ಸಚಿನ ಕುಳಗೇರಿ

| Published : Sep 19 2025, 01:00 AM IST

ಸೆಪ್ಟೆಂಬರ್‌ 19ರಿಂದ ಬೀದರ್‌ನಲ್ಲಿ ಎಬಿವಿಪಿಯಿಂದ ರಥಯಾತ್ರೆ ಆರಂಭ: ಸಚಿನ ಕುಳಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಮೊದಲ ಮಹಿಳಾ ಸ್ವತಂತ್ರ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದಿಂದ ಸೆ.19ರಿಂದ 25ರವರೆಗೆ ನಗರದಲ್ಲಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ಭಾರತದ ಮೊದಲ ಮಹಿಳಾ ಸ್ವತಂತ್ರ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದಿಂದ ಸೆ.19ರಿಂದ 25ರವರೆಗೆ ನಗರದಲ್ಲಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಭಾರತದ ಇತಿಹಾಸದಲ್ಲಿ 200 ವರ್ಷಗಳ ಹಿಂದೆ ಮಹಿಳೆಯೊಬ್ಬಳು ದಕ್ಷ ಆಡಳಿತ ನಡೆಸಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕತ್ತಿ ಹಿಡಿದು ಧೈರ್ಯದಿಂದ ಯುದ್ಧ ಮಾಡಿ ಮೊದಲ ಯುದ್ಧದಲ್ಲಿ ಅವರನ್ನು ಸೋಲಿಸಿ, ಕಿತ್ತೂರಿನ ಸ್ವಾತಂತ್ರ್ಯವನ್ನು ರಕ್ಷಿಸಲು ಯತ್ನಿಸಿದ ಧೀಮಂತ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಸಾಹತುಶಾಹಿ ವಿರುದ್ಧ ಹೋರಾಡಿದ ಮೊದಲ ಮಹಿಳಾ ಆಡಳಿತಗಾರ್ತಿಯಾಗಿ ಭಾರತೀಯ ಸ್ವತಂತ್ರ ಚಳವಳಿಯ ಪ್ರಮುಖ ಸಂಕೇತವಾಗಿ ಅವರನ್ನು ನೆನಪಿಸಲಾಗುತ್ತಿದೆ ಎಂದರು.

16ನೇ ಶತಮಾನದಲ್ಲಿ ಕರಾವಳಿ ಕರ್ನಾಟಕದ ಉಲ್ಲಾಳವನ್ನು ಅಳಿದ ಚೌಟ ರಾಜವಂಶದ ಪ್ರಥಮ ತೌಲವ ರಾಣಿಯಾಗಿದ್ದಳು. ರಾಣಿ ಅಬ್ಬಕ್ಕ ತನ್ನ ಹೋರಾಟದ ಮೂಲಕ ಪೋರ್ಚುಗೀಸರ ಪಾಲಿಗೆ ಸಿಂಹ ಸ್ವಪ್ನವಾಗಿದ್ದಳು. ಈ ಇಬ್ಬರು ಕನ್ನಡ ನಾಡಿನ ಹೋರಾಟಗಾರರ ಕುರಿತು ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ತಿಳಿಸುವ ದೃಷ್ಟಿಯಿಂದ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಡಾ.ರಜನೀಶ ವಾಲಿ ಮಾತನಾಡಿ, ರಥಯಾತ್ರೆಯು ಸೆ.19ರಂದು ಬೆಳಿಗ್ಗೆ ಬೀದರ್‌ ನಗರದ ಸಿದ್ದಾರೂಢ ಮಠದ ಆವರಣದಲ್ಲಿ ಬೆಳಿಗ್ಗೆ 9.30 ಕ್ಕೆ ಚಿದಂಬರಾಶ್ರಮದ ಡಾ.ಶಿವಕುಮಾರ ಸ್ವಾಮಿಜಿ ಅವರು ಚಾಲನೆ ನೀಡಲಿದ್ದು ಬಳಿಕ ರಾಣಿ ಕಿತ್ತುರು ಚೆನ್ನಮ್ಮ ವೃತ್ತದ (ಮೈಲುರ ಕ್ರಾಸ್) ಬಳಿ 10.30 ಕ್ಕೆ ಸಾರ್ವಜನಿಕ ಸಭೆ ನಡೆಯಲಿದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶಾಲಿನಿ ಶರ್ಮಾ ಅವರು ಮಾತನಾಡಲಿದ್ದಾರೆ, ಸೂಮಾರು ಐದು ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿ ಹೋಸಳ್ಳಿ ಮಾತನಾಡಿ, ಸಾರ್ವಜನಿಕ ಸಭೆಯ ಬಳಿಕ ರಥವು ಬೀದರ ನಗರದ ಪ್ರಮುಖ ವೃತ್ತಗಳ ಮೂಲಕ ಹಾದು ನೌಬಾದ ಮಾರ್ಗವಾಗಿ ಹುಮನಾಬಾದ ತಲುಪಲಿದ್ದು ಮಧ್ಯಾಹ್ನ 1 ಗಂಟೆಗೆ ಅಲ್ಲಿಯು ಕೂಡ ಸಾರ್ವಜನಿಕ ಸಭೆ ನಡೆಯಲಿದೆ.

ಸ್ವಾಗತ ಸಮಿತಿ ಉಪಾಧ್ಯಕ್ಷ ರೇವಣಸಿದ್ದಪ್ಪಾ ಜಲಾದೆ, ಸಂಚಾಲಕ ಗುರುನಾಥ ರಾಜಗೀರಾ, ಸಹ ಸಂಚಾಲಕ ವಿರೇಶ ಸ್ವಾಮಿ, ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹೇಮಂತ, ಜಿಲ್ಲಾ ಪ್ರಮುಖ ಸಂತೋಷ ಹಂಗರಗಿ,ಜಿಲ್ಲಾ ಸಂಚಾಲಕ ನಾಗರಾಜ, ವಿದ್ಯಾರ್ಥಿನಿ ಪ್ರಮುಖ ಸ್ನೇಹಾ, ಪ್ರಾರ್ಥನಾ ಇತರರು ಹಾಜರಿದ್ದರು.