ಕನ್ನಡಪ್ರಭ ವಾರ್ತೆ ಕುಮಟಾ

ಕನ್ನಡ ಭಾಷೆ ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿರುವವರು ದೊಡ್ಡ ದೊಡ್ಡ ಸಾಧಕರಾಗಿದ್ದಾರೆ. ಸಾಧನೆ ಯಾರ ಸ್ವತ್ತು ಅಲ್ಲ, ಅದು ಪ್ರಯತ್ನದ ಫಲ ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಹೇಳಿದರು.

ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳ ಜಂಟಿ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಪರೀಕ್ಷೆಗೆ ಪೂರ್ಣಾಂಕ ಪಡೆದ ತಾಲೂಕಿನ ೧೦೭ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸುವ ಕಾರ್ಯಕ್ರಮವನ್ನು ಪಟ್ಟಣದ ಚಿತ್ರಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಪ್ರದಾನ ಮಾಡಿದ ಸಾಹಿತಿ ರಾಜೀವ ನಾಯ್ಕ ಕೋನಳ್ಳಿ, ಅಂಕಗಳನ್ನು ಪಡೆಯುವದರ ಜತೆಗೆ ವಿಸ್ತೃತ ಜ್ಞಾನ ಸಂಪಾದನೆಯಡೆ ಗಮನ ಹರಿಸಬೇಕು ಎಂದರು.

ಬಿಇಒ ಉದಯ ನಾಯ್ಕ, ಅಂಕಗಳಷ್ಟೇ ಅಲ್ಲದೇ ಸಂಸ್ಕಾರವನ್ನು ಗಳಿಸಿಕೊಂಡಾಗ ಮಾತ್ರ ಪಡೆದ ಶಿಕ್ಷಣಕ್ಕೆ ಮೌಲ್ಯ ಸಿಗುತ್ತದೆ ಎಂದರು. ಸಾಹಿತಿ ರೋಹಿದಾಸ ನಾಯಕ, ಸಾಹಿತ್ಯ ಪರಿಷತ್‌ನಿಂದ ಸಾವಿರಾರು ವಿದ್ಯಾರ್ಥಿಗಳನ್ನು ಸನ್ಮಾನಿಸಿರುವುದು ಹೆಗ್ಗಳಿಕೆಯಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಕನ್ನಡ ಹೃದಯ ಶ್ರೀಮಂತಿಕೆಯ ಭಾಷೆ, ಸದಾ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಹೊಂದಿರಬೇಕು ಎಂದರು.

ಚುಟುಕು ಕವಿ ಬೀರಣ್ಣ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಮಾಧ್ಯಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಅನಿಲ್ ರೊಡ್ರಗೀಸ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬೀರದಾಸ ಗುನಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಮುಖ್ಯಶಿಕ್ಷಕ ಪಾಂಡುರಂಗ ವಾಗ್ರೆಕರ, ಮೋಹನ ಶಾನಭಾಗ, ಪಿ.ಆರ್. ನಾಯ್ಕ, ಪಿ.ಎಂ. ಮುಕ್ರಿ, ಪ್ರದೀಪ ನಾಯಕ ಉಪಸ್ಥಿತರಿದ್ದರು. ಪರಿಷತ್ ತಾಲೂಕಾಧ್ಯಕ್ಷ ಪ್ರಮೋದ ನಾಯ್ಕ ಸ್ವಾಗತಿಸಿದರು. ನಾಗರಾಜ ಶೆಟ್ಟಿ ನಿರೂಪಿಸಿದರು.