ಕೊಪ್ಪಳ: ಜೂ. 25ರಂದು ಜಿಲ್ಲೆಯಲ್ಲಿ ನಡೆಯುವ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟು ವ್ಯವಸ್ಥೆ ಮಾಡಲು ಸಮಿತಿಗಳನ್ನು ರಚಿಸಿ ಕರ್ತವ್ಯ ಹಂಚಿಕೆ ಮಾಡಲಾಗಿದ್ದು, ಅದರನ್ವಯ ಅಧಿಕಾರಿಗಳು ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೂಚಿಸಿದರು.
ತಾಲೂಕಿನ ಮುನಿರಾಬಾದ್‌ನ ಇಂಡಿಯಾ ರಿಸರ್ವ್ ಬಟಾಲಿಯನ್‌ನ ಆಡಿಟೋರಿಯಂ ಸಭಾಂಗಣದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಹಾಗೂ ಕರ್ತವ್ಯ ನಿರ್ವಹಣೆಗಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಜಿಲ್ಲೆಗೆ ಆಗಮಿಸಲಿದ್ದು, ತುಂಗಭದ್ರಾ ಜಲಾಶಯದ ನೂತನ ಸ್ವಿಲ್‌ವೇ ಗೇಟುಗಳನ್ನು ಲೋಕಾರ್ಪಣೆಗೊಳಿಸಿ, ಆನಂತರ ಐಆರ್‌ಬಿಯ ಆಡಿಟೋರಿಯಂ ಸಭಾಂಗಣದಲ್ಲಿ ಪ್ರಮುಖ ಸಮಾನಾಂತರ ಜಲಾಶಯಗಳು ಹಾಗೂ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸುವರು. ಆನಂತರ ಮುನಿರಾಬಾದ್‌ನ ಸರ್ಕಾರಿ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಆದ್ದರಿಂದ ಈ ಉದ್ದೇಶಕ್ಕಾಗಿ ನಿರ್ಮಿಸಲಾದ ಹೆಲಿಪ್ಯಾಡ್, ವೇದಿಕೆ ಕಾರ್ಯಕ್ರಮ ಸೇರಿದಂತೆ ಪ್ರತಿಯೊಂದು ವಿಷಯಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಕೈಗೊಳ್ಳಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆಹಾರವನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು. ನೀರಾವರಿ ಇಲಾಖೆಯಿಂದ ಕರ್ತವ್ಯ ಹಂಚಿಕೆ ಮಾಡಿ ನಿರ್ದಿಷ್ಟ ಸ್ಥಳಗಳಲ್ಲಿ ಸೂಕ್ತ ಮಾಹಿತಿಯೊಂದಿಗೆ ಅಧಿಕಾರಿಗಳನ್ನು ನಿಯೋಜಿಸಬೇಕು. ಲೋಕೋಪಯೋಗಿ ಇಲಾಖೆಯಿಂದ ಹೆಲಿಪ್ಯಾಡ್ ನಿರ್ಮಾಣ, ಇಲಾಖಾ ವ್ಯಾಪ್ತಿಯ ರಸ್ತೆಗಳ ದುರಸ್ತಿ ಕೈಗೊಳ್ಳಬೇಕು. ಅಬಕಾರಿ ಇಲಾಖೆಯು ಹೆಲಿಕ್ಯಾಪ್ಟರ್ ಪೈಲಟ್‌ಗಳ ಜವಾಬ್ದಾರಿ ನಿರ್ವಹಿಸಬೇಕು ಎಂದು ಹಂಚಿಕೆ ಮಾಡಲಾದ ಕರ್ತವ್ಯಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನಕಗಿರಿ ಶಾಸಕ ಶಿವರಾಜ ತಂಗಡಗಿ ಮಾತನಾಡಿ, ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಕಡ್ಡಾಯ. ಈ ಬಗ್ಗೆ ನಿರ್ದಿಷ್ಟ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ. ವೇದಿಕೆ ಮೇಲೆ ಯಾರಿಗೂ ಅಗೌರವ ಉಂಟಾಗದಂತೆ ಹಾಗೂ ಗೊಂದಲಕ್ಕೆ ಆಸ್ಪದವಿಲ್ಲದಂತೆ ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಸಮಾನಾಂತರ ಜಲಾಶಯ ಹಾಗೂ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯೊಂದಿಗೆ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಬೇಕು. ತುಂಗಭದ್ರಾ ನದಿಯು ಮೂರು ರಾಜ್ಯಗಳ ಜೀವನಾಡಿಯಾಗಿದ್ದು, ನೂತನವಾಗಿ ಅಳವಡಿಸಿದ ಸ್ವಿಲ್‌ಗೇಟುಗಳು ತಾಂತ್ರಿಕವಾಗಿ ಹೆಮ್ಮೆಯ ಪ್ರತೀಕವಾಗಿವೆ. ಕಡಿಮೆ ಅವಧಿಯಲ್ಲಿ ಗುಣಮಟ್ಟದ ಹಾಗೂ ಆಧುನಿಕ ಗೇಟುಗಳನ್ನು ಅಳವಡಿಸಿದ ತಂತ್ರಜ್ಞರು, ಕಾರ್ಮಿಕರಿಗೆ ಅಂದು ಸನ್ಮಾನಿಸಲಾಗುವುದು. ಆದ್ದರಿಂದ ಜವಾಬ್ದಾರಿ ಹಂಚಿಕೆಯಾದ ಅಧಿಕಾರಿಗಳು ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ ಎಂದು ಹೇಳಿದರು.ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ಕೇಂದ್ರ ಜಲಶಕ್ತಿ ಸಚಿವರು ಭಾಗವಹಿಸಲಿದ್ದು, ಅವರ ಭದ್ರತೆ ಹಾಗೂ ಶಿಷ್ಠಾಚಾರ ಪಾಲನೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.
ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ತುಂಗಭದ್ರಾ ನದಿ ಮೂರು ರಾಜ್ಯಗಳಿಗೆ ಸಂಬಂಧಿಸಿದ್ದಾದರೂ, ಅದರ ಜಲಾಶಯವಿರುವುದು ನಮ್ಮ ರಾಜ್ಯ ಹಾಗೂ ನಮ್ಮದೇ ಜಿಲ್ಲೆಯಲ್ಲಿ. ಹಾಗಾಗಿ ನಮ್ಮ ಜಿಲ್ಲೆ ಅಂದು ಆಕರ್ಷಣೆಯ ಕೇಂದ್ರ ಬಿಂದುವಾಗಲಿದ್ದು, ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್‌ಕುಮಾರ, ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರರು ಎಸ್.ಬಿ. ಮಲ್ಲಿಗೆವಾಡ ಇದ್ದರು.