ಕೃಷಿ ಸಂವಾದ ಕಾರ್ಯಕ್ರಮ, ಗವ್ಯೋತ್ಪನ್ನ ತಯಾರಿಕೆ ಮಾಹಿತಿ
ಕನ್ನಡಪ್ರಭ ವಾರ್ತೆ ಸಿದ್ದಾಪುರತಾಲೂಕಿನ ಭಾನ್ಕುಳಿಯ ಗೋಸ್ವರ್ಗದ ಸಂಶೋಧನಾ ಕೇಂದ್ರದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ಕಾಮದುಘಾ ಟ್ರಸ್ಟ್, ಗೋಫಲ ಟ್ರಸ್ಟ್, ಗೋಸ್ವರ್ಗ, ಶ್ರೀರಾಮದೇವ ಮಠ ಬಾನ್ಕುಳಿ, ಮಾತೃತ್ವಮ್ ಆಶ್ರಯದಲ್ಲಿ ಕೃಷಿ ಇಲಾಖೆ, ಶಿರಸಿ ಕೆವಿಕೆ, ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಗೋವು-ಮಣ್ಣು-ಅಡಕೆ ವಿಷಯವಾಗಿ ಮಾಹಿತಿ ಶಿಬಿರ, ಸಂವಾದ ಕಾರ್ಯಕ್ರಮ ನಡೆಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಂ. ಸುಮಾ ಅವರು ಗೋಮಯ ರಾಶಿಗೆ ಆರತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸಾವಯವ ಕೃಷಿ ಪದ್ಧತಿಗೆ ಸರ್ಕಾರದ ನೆರವಿನ ಕುರಿತು ತಿಳಿಸಿದರು. ಕೇಂದ್ರ ಸರ್ಕಾರದ ನೈಸರ್ಗಿಕ ಕೃಷಿ ಯೋಜನೆಯಡಿ ಗೋಸ್ವರ್ಗವನ್ನು ಜೈವ ಸಂಪನ್ಮೂಲ ಕೇಂದ್ರವನ್ನಾಗಿ ಆಯ್ಕೆ ಮಾಡಿದ್ದು, ಈ ಕೇಂದ್ರ ಜಿಲ್ಲೆಯಲ್ಲಿಯೇ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹವ್ಯಕ ಮಹಾಮಂಡಲ ಕಾರ್ಯದರ್ಶಿ ಮಹೇಶ ಚಟ್ನಳ್ಳಿ ಶ್ರೀ ರಾಮಚಂದ್ರಾಪುರ ಮಠವು ದೇಶೀಯ ಗೋವಿನ ಸಂರಕ್ಷಣೆ ಕುರಿತು ನಡೆಸಿದ ಆಂದೋಲನಗಳ ಮಾಹಿತಿ ನೀಡಿದರು. ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಶಂಕರ ಹೆಗಡೆ ಮಣ್ಣಿನ ವಿಧಗಳು, ಮಣ್ಣಿನ ಪ್ರಾಮುಖ್ಯತೆ ಕುರಿತು ಕೃಷಿಕರಿಗೆ ಮಾಹಿತಿ ನೀಡಿದರು. ಕೆವಿಕೆ ವಿಜ್ಞಾನಿ ಡಾ. ಶ್ವೇತಾಕುಮಾರಿ ಸಾವಯವ ಗೊಬ್ಬರ ತಯಾರಿಕಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನಿ ಡಾ. ಅಮಿತ ಪೂಜಾರ ಅಡಕೆ ಬೆಳೆಗಳ ರೋಗಗಳ ಹತೋಟಿ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಎಲೆಚುಕ್ಕಿ ರೋಗದ ಹತೋಟಿ, ನಿರ್ವಹಣೆ, ಬೋರ್ಡೋ ದ್ರಾವಣ ತಯಾರಿಸುವ ವಿಧಾನ ತಿಳಿಸಿದರು.
ಗೋಫಲ ಟ್ರಸ್ಟಿನ ಮುಖ್ಯ ಕಾರ್ಯನಿರ್ವಾಹಕ ಬಾಲಸುಬ್ರಹ್ಮಣ್ಯ ಗವ್ಯ ಉತ್ಪನ್ನಗಳ ಬಗ್ಗೆ ತಿಳಿಸಿದರು.
ಗೋಸ್ವರ್ಗದ ಗೌರವ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಅಧ್ಯಕ್ಷತೆ ವಹಿಸಿದ್ದರು. ವನಮಹೋತ್ಸವದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಶೋಧನಾ ಖಂಡದ ಶ್ರೀಸಂಯೋಜಕ ಡಾ. ಜಯಪ್ರಕಾಶ ಲಾಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಕೃಷಿ ಸಂವಾದ: ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಗವ್ಯೋತ್ಪನ್ನಗಳಿಂದ ಘನಜೀವಾಮೃತ ಕೀಟನಾಶಕಗಳು, ಫಿನಾಯಿಲ್ ತಯಾರಿಕಾ ವಿಧಾನಗಳ ಬಗ್ಗೆ ಬಾಲಚಂದ್ರ ಹೆಗಡೆ ಮಗೆಗಾರು, ಆದರ್ಶ, ಮಂಜುನಾಥ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಡಾ. ಗುರುರಾಜ ಪಡೀಲು ಕಾರ್ಯಕ್ರಮ ನಿರ್ವಹಿಸಿದರು. ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಗೋಸ್ವರ್ಗದ ಅಧ್ಯಕ್ಷ ಎಂ.ಜಿ. ರಾಮಚಂದ್ರ, ವಿಜಯಾ ಗಂಗಾಧರ ಗೋ ಗೀತೆಯನ್ನು ಪ್ರಸ್ತುತ ಪಡಿಸಿದರು. ಕಲ್ಪನಾ ತಲವಾಟ ಕಾರ್ಯಕ್ರಮ ನಿರ್ವಹಿಸಿದರು. ಜೈವಿಕ ಸಂಪನ್ಮೂಲ ಕೇಂದ್ರದ ಸಂಚಾಲಕ ರಾಘವೇಂದ್ರ ಮುಸವಳ್ಳಿ ವಂದಿಸಿದರು.