ಮಲೇಬೆನ್ನೂರು : ಡಿಸಿ ವರದಿ ಆಧರಿಸಿ ಶಾಲೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಕ್ರಮ

| Published : Nov 18 2024, 01:17 AM IST / Updated: Nov 18 2024, 12:45 PM IST

ಮಲೇಬೆನ್ನೂರು : ಡಿಸಿ ವರದಿ ಆಧರಿಸಿ ಶಾಲೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಬೆನ್ನೂರು ಪಟ್ಟಣದ ಪುರಸಭೆ ಅಧ್ಯಕ್ಷೆ ನಫ್ಷಿಯಾ ಬಾನು ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಉಪಸ್ಥಿತಿಯಲ್ಲಿ ಶನಿವಾರ ಸಾಮಾನ್ಯ ಸಭೆ ನಡೆಯಿತು.

 ಮಲೇಬೆನ್ನೂರು : ಪಟ್ಟಣದ ಪುರಸಭೆ ಅಧ್ಯಕ್ಷೆ ನಫ್ಷಿಯಾ ಬಾನು ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಉಪಸ್ಥಿತಿಯಲ್ಲಿ ಶನಿವಾರ ಸಾಮಾನ್ಯ ಸಭೆ ನಡೆಯಿತು.

ಪುರಸಭೆ ಎದುರು ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ ಬಗ್ಗೆಯೂ ಸಭೆ ಚರ್ಚಿಸಿತು. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದು ಮತ್ತು ಇಂದಿರಾ ಕ್ಯಾಂಟೀನ್ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಅವರಿಂದ ವರದಿ ಬಂದ ನಂತರ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲು ಸಭೆ ನಿರ್ಣಯಿಸಿತು.

ನಗರೋತ್ಥಾನದಡಿ ಮಂಜೂರಾದ ₹66  ಕೋಟಿ ವೆಚ್ಚದಲ್ಲಿ ಪಟ್ಟಣದ ಆಶ್ರಯ ಕಾಲೋನಿ, ನೀರಾವರಿ ನಿಗಮ ಮತ್ತು ಬಸವೇಶ್ವರ ಬಡಾವಣೆಯಲ್ಲಿ 3 ಹೆಚ್ಚುವರಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಎಂಜಿನಿಯರ್ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಒಟ್ಟು 13  ಚರ್ಚಾ ವಿಷಯಗಳಿದ್ದು, ಒಂದು ತಾಸು ಚರ್ಚೆಗೊಂಡರೆ, ಹಿಂದಿನ ಸಭೆಯ ನಿರ್ಣಯಗಳ ಚರ್ಚೆಯೇ ಬರೋಬ್ಬರಿ ಮೂರು ತಾಸು ನಡೆಯಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆ ಕಾಮಗಾರಿಗಳನ್ನು ತೆಗೆದುಕೊಳ್ಳಲು, ಉರ್ದು ಶಾಲೆಯಲ್ಲಿನ ಶೌಚಾಲಯ ದುರಸ್ತಿ, ಪುರಸಭೆ 6ನೇ ವಾರ್ಡ್‌ನಲ್ಲಿ ಮಿನಿ ಟ್ಯಾಂಕ್ ನಿರ್ಮಿಸಿ ಪೈಪ್ ಲೈನ್ ಹಾಕಿಸಲು, ಸಂತೆ ಮೈದಾನದಲ್ಲಿನ ಶಿಥಿಲಗೊಂಡ ನೀರಿನ ಟ್ಯಾಂಕ್ ನೆಲಸಮ ಮಾಡಲು ಕಾಂಗ್ರೆಸ್ ಸದಸ್ಯರಾದ ಸಾಬಿರ್‌ ಅಲಿ, ಲೋಕೇಶ್, ಆರಿಫ್, ದಾದಾಪೀರ್, ನಯಾಜ್, ಬಿ.ವೀರಯ್ಯ, ಷಾ ಅಬ್ರಾರ್, ವಿಜಯಲಕ್ಷ್ಮೀ, ಶಬ್ಬೀರ್, ಗೌಡರ ಮಂಜುನಾಥ್ ಮತ್ತಿತರರು ಮೇಜು ಕುಟ್ಟಿ ಸರ್ವಾನುಮತದಿಂದ ಬೆಂಬಲ ನೀಡಿದರು.

ಸದಸ್ಯರಾದ ಷಾ ಅಬ್ರಾರ್, ಸುಲೋಚನಮ್ಮ, ನಜೀಮಾ ಬಾನು ಅವರನ್ನು ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಸಭೆ ಆಯ್ಕೆ ಮಾಡಿತು. ಬಹುಮತ ಇದೆ ಎಂದು ₹2 ಲಕ್ಷ ಖರ್ಚು ಹಾಕಿ ಎಂಬ ವಿಪಕ್ಷ ಸದಸ್ಯ ಹನುಮಂತಪ್ಪ ಆಡಿದ ಮಾತು ಕೆಲ ಸದಸ್ಯರನ್ನು ಕೆರಳಿಸಿತು. ಇದಕ್ಕಾಗಿ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಎಚ್‌.ಎನ್‌. ಭಜಕ್ಕನವರ್, ಸಿಬ್ಬಂದಿ ಆರೋಗ್ಯ ನಿರೀಕ್ಷಕ ಶಿವರಾಜ್, ಕಂದಾಯ ವಿಭಾಗ ನಿರೀಕ್ಷಕ ಅವಿನಾಶ್, ಪರಿಸರ ಅಭಿಯಂತರ ಉಮೇಶ್ ವಿವಿಧ ವಿಭಾಗದ ವರದಿ ಮಂಡಿಸಿದರು.