ಗುತ್ತಲದ ಸಣ್ಣ, ದೊಡ್ಡ ಹೊಂಡ ಅಭಿವೃದ್ಧಿಗೆ ಕ್ರಮ: ರುದ್ರಪ್ಪ ಲಮಾಣಿ

| Published : Sep 19 2025, 01:01 AM IST / Updated: Sep 19 2025, 01:02 AM IST

ಗುತ್ತಲದ ಸಣ್ಣ, ದೊಡ್ಡ ಹೊಂಡ ಅಭಿವೃದ್ಧಿಗೆ ಕ್ರಮ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸಣ್ಣ ಹೊಂಡ ಅತಿಕ್ರಮಣ ಆಗಿರುವ ಬಗ್ಗೆ ದೂರು ಇದ್ದು, ಸ್ವಚ್ಛಗೊಳಿಸಿ ನಂತರ ಅತಿಕ್ರಮಣ ತೆರವು ಮಾಡಬೇಕೆಂದು ಸದಸ್ಯ ಬಸಣ್ಣ ನೆಗಳೂರ ಆಗ್ರಹಿಸಿದರು.

ಗುತ್ತಲ: ಸ್ಮಶಾನವನ್ನು ಬೇರೆಡೆ ಸ್ಥಳಾಂತರಿಸಿ, ಸಣ್ಣ ಹೊಂಡ ಹಾಗೂ ದೊಡ್ಡ ಹೊಂಡದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವೆ. ಇವುಗಳನ್ನು ಅಭಿವೃದ್ಧಿಪಡಿಸಿ ಸುಂದರ ಉದ್ಯಾನವನ ಹಾಗೂ ವಾಕಿಂಗ್ ಪಾತ್‌ ಮಾಡುವುದರಿಂದ ಜನರಿಗೆ ಸಹಾಯವಾಗುವುದೆಂದು ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.

ಪಟ್ಟಣದ ಪಪಂನ ಕಾರ್ಯಾಲಯದಲ್ಲಿ ಇತ್ತೀಚೆಗೆ ಜರುಗಿದ ಸಾಮಾನ್ಯ ಸಭೆಯಲ್ಲಿ ಹೊಂಡಗಳ ದುಸ್ಥಿತಿ ಬಗ್ಗೆ ನಡೆದ ಗಂಭೀರ ಚರ್ಚೆ ವೇಳೆ, ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಈ ಹೊಂಡಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬೇಕಾಗಿದ್ದು, ಇದನ್ನು ಶೀಘ್ರದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಎಂದ ರುದ್ರಪ್ಪ ಲಮಾಣಿ ಅವರು, ಅಲ್ಲಿರುವ ಸ್ಮಶಾನವನ್ನು ಬೇರೆಡೆ ಸ್ಥಳಾಂತರಿಸಿದರೆ ಉತ್ತಮವಾಗುವುದು. ಅದಕ್ಕಾಗಿ ಪ್ರತ್ಯೇಕವಾಗಿ 2 ಎಕರೆ ಜಮೀನು ಖರೀದಿಸಿದರೆ ಉತ್ತಮ. ಯಾರಾದರೂ ಜಮೀನು ನೀಡುವವರಿದ್ದರೆ ತಿಳಿಸಿ ಎಂದರು.

ಈ ವೇಳೆ ಸಣ್ಣ ಹೊಂಡ ಅತಿಕ್ರಮಣ ಆಗಿರುವ ಬಗ್ಗೆ ದೂರು ಇದ್ದು, ಸ್ವಚ್ಛಗೊಳಿಸಿ ನಂತರ ಅತಿಕ್ರಮಣ ತೆರವು ಮಾಡಬೇಕೆಂದು ಸದಸ್ಯ ಬಸಣ್ಣ ನೆಗಳೂರ ಆಗ್ರಹಿಸಿದರು. ಆಗ ನಾಮನಿದೇಶಿತ ಸದಸ್ಯ ಪಿ.ಎನ್. ಹೇಮಗಿರಿಮಠ ಮಾತನಾಡಿ, ಎರಡು ಹೊಂಡಗಳು 9.11 ಎಕರೆ ವ್ಯಾಪ್ತಿಯಲ್ಲಿದ್ದು, ಸರ್ವೆ ಮಾಡಿಸಲು ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದರು. ಆಗ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ ಮಾತನಾಡಿ, ಸರ್ವೆ ಮಾಡಲಾಗಿದ್ದು, ಅತಿಕ್ರಮಣ ಆಗಿದೆ ಎಂದು ವರದಿ ಸಹ ನೀಡಿದ್ದಾರೆಂದು ಉತ್ತರಿಸಿದರು.

ನೂತನ ಪಪಂ ಕಟ್ಟಡವನ್ನು ಅ. 8ರಂದು ಉದ್ಘಾಟನೆ ಮಾಡುವುದಾಗಿ ರುದ್ರಪ್ಪ ಲಮಾಣಿ ತಿಳಿಸಿದರು. ಅಲ್ಲದೆ ಅಲ್ಲಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪಟ್ಟಣದ ವ್ಯಾಪ್ತಿಯ ಕುರಿ ಸಂವರ್ಧನಾ ಕೇಂದ್ರದ ಅಧಿನದಲ್ಲಿ 258 ಎಕರೆ ಜಮೀನಿದ್ದು, ಅದರಲ್ಲಿ 40- 50 ಎಕರೆ ಪ್ರದೇಶವನ್ನು ಪಡೆದುವಸತಿ, ವಿವಿಧ ಸರ್ಕಾರಿ ಕಟ್ಟಡ ನಿರ್ಮಿಸಲು ಸಹಾಯ ಆಗುವುದು ಎಂದು ಸದಸ್ಯ ಎಸ್.ಜಿ. ಹೊನ್ನಪ್ಪನವರ ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿ ಮಾತನಾಡಿದ ನಾಮನಿರ್ದೇಶಿತ ಸದಸ್ಯ ಪಿ.ಎನ್. ಹೇಮಗಿರಿಮಠ ಅವರು, ಸಂವರ್ಧನಾ ಕೇಂದ್ರದಲ್ಲಿ ಸುಮಾರು 210 ಕುರಿಗಳು ಮಾತ್ರ ಇದ್ದು, ಇದರ ಜಮೀನಿನಲ್ಲಿ ಈಗಾಗಲೇ ಗೋಶಾಲೆಗೆ 4 ಎಕರೆ ಜಮೀನು ನೀಡಲಾಗಿದೆ. ಪಟ್ಟಣದ ಹತ್ತಿರ ಇರುವ ಯಾರಾದರೂ ರೈತರಿಂದ ಸುಮಾರು 10- 20 ಎಕರೆ ಜಮೀನು ಪಡೆದು ಅವರಿಗೆ ಕುರಿ ಸಂವರ್ಧನಾ ಕೇಂದ್ರದ ಜಮೀನು ನೀಡಿದರೆ ಜಮೀನು ನೀಡಿದ ರೈತರಿಗೂ ಅದರಿಂದ ಸಹಾಯವಾಗುವುದು. ವಸತಿರಹಿತರಿಗೆ ನಿವೇಶನ ನೀಡಿ ಬಡವರಿಗೆ ಮನೆಗಳನ್ನು ನೀಡಿದಂತಾಗುತ್ತದೆ ಎಂದರು. ಆಗ ರುದ್ರಪ್ಪ ಲಮಾಣಿ ಮಾತನಾಡಿ, ಈ ಬಗ್ಗೆ ಸಂಬಂಧಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡುವ ಭರವಸೆ ನೀಡಿದರು.ಪಪಂ ಅಧ್ಯಕ್ಷೆ ಮಾಳವ್ವ ಗೊರವರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಭರಮಣ್ಣ ಹಾದಿಮನಿ, ಮಹ್ಮದಹನೀಫ ರಿತ್ತಿ, ಮಾಲತೇಶ ಶೀತಾಳ, ನಿಂಗರಾಜ ನಾಯಕ, ಚನ್ನಪ್ಪ ಕಲಾಲ, ದೀಪಾ ಭರಡಿ, ಶಕುಂತಲಾ ಗುತ್ತಲ, ಸಾವಿತ್ರವ್ವ ಘಂಟಿ, ಗಣೇಶ ಅರೇಮಲ್ಲಾಪುರ, ಖಲೀಲಹ್ಮದ ಖಾಜಿ, ನಾಗರತ್ನ ಬಡಿಗೇರ, ಪಾರವ್ವ ಲಮಾಣಿ, ರೇಖಾ ಲಮಾಣಿ ಸೇರಿದಂತೆ ಕಿರಿಯ ಎಂಜಿನಿಯರ್ ಸುರೇಶ ಚಲವಾದಿ ಸೇರಿದಂತೆ ಪಪಂ ಸಿಬ್ಬಂದಿ ಇದ್ದರು.