ಸುಲಭ ಸೇವೆಗಾಗಿ ಕಂದಾಯ ದಾಖಲೆ ಡಿಜಿಟಲೀಕರಣ

| Published : Sep 19 2025, 01:01 AM IST / Updated: Sep 19 2025, 01:02 AM IST

ಸಾರಾಂಶ

ಕಂದಾಯ ಇಲಾಖೆಯ ಹಳೆ ದಾಖಲೆ ಸುರಕ್ಷಿತಗೊಳಿಸಲು ಹಾಗೂ ಸುಳ್ಳು ದಾಖಲೆ ಸೃಷ್ಟಿ ತಡೆಗೆ ಸರ್ಕಾರ ಜಾರಿಗೊಳಿಸಿರುವ ಭೂ-ಸುರಕ್ಷಾ ಯೋಜನೆಯಡಿ ಅಂಕೋಲಾ ತಾಲೂಕಿನಲ್ಲಿ 60.52 ಲಕ್ಷ ಪುಟಗಳನ್ನು ಡಿಜಿಟಲೀಕರಣ ಸ್ಯಾನಿಂಗ್ ಕಾರ್ಯ ಭರದಿಂದ ಸಾಗಿದೆ.

ರಾಘು ಕಾಕರಮಠ

ಅಂಕೋಲಾ: ಕಂದಾಯ ಇಲಾಖೆಯ ಹಳೆ ದಾಖಲೆ ಸುರಕ್ಷಿತಗೊಳಿಸಲು ಹಾಗೂ ಸುಳ್ಳು ದಾಖಲೆ ಸೃಷ್ಟಿ ತಡೆಗೆ ಸರ್ಕಾರ ಜಾರಿಗೊಳಿಸಿರುವ ಭೂ-ಸುರಕ್ಷಾ ಯೋಜನೆಯಡಿ ತಾಲೂಕಿನಲ್ಲಿ 60.52 ಲಕ್ಷ ಪುಟಗಳನ್ನು ಡಿಜಿಟಲೀಕರಣ ಸ್ಯಾನಿಂಗ್ ಕಾರ್ಯ ಭರದಿಂದ ಸಾಗಿದೆ.

ತಾಲೂಕಿನಲ್ಲಿ ಕಂದಾಯ ಇಲಾಖೆಯ 1.47 ಲಕ್ಷ ಕಡತಗಳಿವೆ. ಇದರಲ್ಲಿ 60.52 ಲಕ್ಷ ಪುಟಗಳನ್ನು ಹೊಂದಿದೆ. ಈಗಾಗಲೇ 19.68 ಲಕ್ಷ ದಾಖಲೆಗಳು ಸ್ಕ್ಯಾನಿಂಗ್ ಆಗಿ, ಆಪ್‌ಲೋಡ್ ಆಗಿವೆ. ಇನ್ನುಳಿದ ಪುಟಗಳನ್ನು ಡಿಜಿಟಲೀಕರಣ ಮಾಡಿ ದಾಖಲೆಗಳನ್ನು ಅಂಗೈಯಲ್ಲೇ ಸೇವೆ ದೊರೆಯುವಂತೆ ಮಾಡಿ, ಅತ್ಯಂತ ಸುಲಭ ಹಾಗೂ ವೇಗವಾಗಿ ದಾಖಲಾತಿಗಳು ಸಿಗುವಂತೆ ಮಾಡುವ ಉದ್ದೇಶದೊಂದಿಗೆ ಸಿಬ್ಬಂದಿ ಸ್ಕ್ಯಾನಿಂಗ್‌ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಮೊದಲು ನಾಡಕಚೇರಿ, ತಹಸೀಲ್ದಾರ್‌ ಕಚೇರಿಗೆ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದರೆ, ದಾಖಲೆ ಸಿಗಲು ತಿಂಗಳುಗಳ ಕಾಲ ಕಾಯಬೇಕಿತ್ತು. ಕೆಲವೊಮ್ಮೆ ದಾಖಲೆಗಳು ಸಿಗದಿದ್ದರೆ ಕಾದು ಕಾದು ಸುಸ್ತಾಗಬೇಕಿತ್ತು. ಅನಿವಾರ್ಯ ಸಂದರ್ಭದಲ್ಲಿ ದಾಖಲೆಗಳೇ ಇಲ್ಲದೇ ಇದ್ದರೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೂ ಸಮಸ್ಯೆಯಾಗುತ್ತಿತ್ತು. ಡಿಜಿಟಲೀಕರಣದಿಂದ ವೆಬ್‌ಸೈಟ್‌ನಲ್ಲಿ ಸಂಬಂಧಿಸಿದ ದಾಖಲೆಗಳನ್ನು ವೀಕ್ಷಿಸಲು ಅವಕಾಶವಷ್ಟೇ ಅಲ್ಲದೇ ಕೇವಲ ₹11 ಪ್ರತಿ ಪೇಜ್‌ಗೆ ಪಾವತಿಸಿ ದಾಖಲೆ ಪ್ರಿಂಟ್ ಪಡೆಯುವ ಯೋಜನೆ ಇದಾಗಿದೆ.

ಏನಿದು ಸ್ಕ್ಯಾನಿಂಗ್‌?: ಕಂದಾಯ ಇಲಾಖೆಯ ಕಡತ ಕೋಣೆಯಲ್ಲಿ ದಶಕಗಳಿಂದ ಇರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಪಹಣಿ ಬುಕ್, ಮ್ಯುಟೇಷನ್ ರಿಜಿಸ್ಟರ್, ಆರ್.ಆರ್.ಟಿ, ತಿದ್ದುಪಡಿ ದಾಖಲೆ ಎ ಮತ್ತು ಬಿ ಎಲ್ಲ ದಾಖಲೆಗಳು ಸ್ಕ್ಯಾನ್ ಆಗಲಿದೆ. ಇದರಿಂದಾಗಿ ಆನ್‌ಲೈನ್‌ನಲ್ಲಿ ದಾಖಲೆಗಳು ಸ್ಕ್ಯಾನ್ ಆಗಿ ಡಿಜಿಟಲೀಕರಣಗೊಳ್ಳುವುದರಿಂದ ದಾಖಲೆಗಳು ಜನರಿಗೆ ಸುಲಭವಾಗಿ ದೊರೆಯಲಿವೆ.

ತುಂಬಾ ಅನುಕೂಲ: ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣದಿಂದ ತುಂಬ ಅನುಕೂಲವಾಗಲಿದೆ. ಕೆಲವೊಮ್ಮೆ ಅರ್ಜಿ ಹಾಕಿದರೂ ದಾಖಲೆಗಳು ಇಲ್ಲವೆಂದು ಹೇಳುತ್ತಿದ್ದರು. ಭೂ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಾದರೆ ಜನರು ಸುಲಭವಾಗಿ ಅವುಗಳನ್ನು ಪಡೆಯಬಹುದು. ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಸಹಕಾರಿ ಧುರೀಣ ವಸಂತ ನಾಯಕ ಜಮಗೋಡ ಹೇಳುತ್ತಾರೆ.

ಸ್ಕ್ಯಾನಿಂಗ್‌ ಗುರಿ: ಭೂ ದಾಖಲೆಗಳ ಗಣಕೀಕರಣ ಕಾರ್ಯ ಜ. 9ರಿಂದ ನಡೆದಿದೆ. ಈಗಾಗಲೇ ಈಗಾಗಲೇ 19.68 ಲಕ್ಷ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್‌ಲೋಡ್ ಮಾಡಲಾಗಿದೆ. ದಿನವೂ 13ರಿಂದ15 ಸಾವಿರ ಪೇಜ್‌ ಸ್ಕ್ಯಾನ್ ಮಾಡಲಾಗುತ್ತಿದೆ. ದಾಖಲೆಗಳ ಡಿಜಿಟಲೀಕರಣದಿಂದ ಜನರಿಗೆ ಅನುಕೂಲವಾಗಲಿದೆ. ಡಿ. 2025ರ ಒಳಗೆ ಸಂಪೂರ್ಣ ಸ್ಕ್ಯಾನಿಂಗ್ ಕಾರ್ಯ ಮುಗಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ತಹಸೀಲ್ದಾರ್‌ ಡಾ. ಚಿಕ್ಕಪ್ಪ ನಾಯಕ ಹೇಳಿದರು.