ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸಿ

| Published : Sep 19 2025, 01:01 AM IST / Updated: Sep 19 2025, 01:02 AM IST

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ 2012ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ 371 (ಜೆ) ಅಡಿ ಮೀಸಲಾತಿ ಒದಗಿಸಿತು. ಕಳೆದ ಒಂದು ದಶಕದಿಂದ ಮಹತ್ವದ ಬದಲಾವಣೆ ಆಗಿಲ್ಲ.

ಕೊಪ್ಪಳ:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ತನಕ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಸ್ತುಸ್ಥಿತಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಆಗ್ರಹಿಸಿದರು.

ಬುಧವಾರ ''''''''ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ''''''''ದ ಅಂಗವಾಗಿ ನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕ್ಷಾತೀತವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ದಶಕಗಳಷ್ಟು ಹೋರಾಟ ನಡೆದಿವೆ. ಕೇಂದ್ರ ಸರ್ಕಾರ 2012ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ 371 (ಜೆ) ಅಡಿ ಮೀಸಲಾತಿ ಒದಗಿಸಿತು. ಕಳೆದ ಒಂದು ದಶಕದಿಂದ ಮಹತ್ವದ ಬದಲಾವಣೆ ಆಗಿಲ್ಲ. ಈ ಅವಧಿಯಲ್ಲಿ ಸರ್ಕಾರ ಬಿಡುಗಡೆ ಮಾಡಿದ ಅನುದಾನ, ಅದು ಬಳಕೆಯಾದ ರೀತಿ, ಈ ಭಾಗದ ಯುವಕರಿಗೆ ಸಿಕ್ಕ ಸರ್ಕಾರಿ ಹುದ್ದೆ ಹಾಗೂ ಪ್ರಸ್ತುತ ಖಾಲಿ ಹುದ್ದೆಗಳ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಆನಂತರ ನಮ್ಮವರಿಂದಲೇ ವಿಮೋಚನೆಗಾಗಿ ಹೋರಾಡಬೇಕಾಯಿತು. ಆನಂತರ ಅಭಿವೃದ್ಧಿಗಾಗಿ ಬೀದಿಗಿಳಿಯಬೇಕಾಯಿತು. ಈಗ ನಮ್ಮ ಹಕ್ಕುಗಳಿಗಾಗಿ ಸರ್ಕಾರದ ಕಣ್ಣು ತೆರೆಸಲು ಪಕ್ಷಾತೀತವಾಗಿ ಆಂದೋಲನ ಹಮ್ಮಿಕೊಳ್ಳುವ ಪರಿಸ್ಥಿತಿ ಇದೆ. ಇಲ್ಲದಿದ್ದರೆ ನಮಗೆ ನ್ಯಾಯ ಸಿಗುವುದಿಲ್ಲ ಎಂದರು.

ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಹೈದರಾಬಾದ್ ಕರ್ನಾಟಕ ಅಧ್ಯಯನ ಪೀಠ ಸ್ಥಾಪಿಸಬೇಕು. ರಜಾಕರ ಹಾವಳಿಯ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದಲ್ಲಿ ಅನೇಕ ಜನ ಹುತಾತ್ಮರಾದರು. ಆ ಪ್ರದೇಶ ಹೈದರಾಬಾದ್ ಕರ್ನಾಟಕದ ಜಲಿಯನ್‌ವಾಲಾ ಬಾಗ್ ಎಂದು ಹೆಸರು ಪಡೆದಿದೆ. ಅಲ್ಲಿ ಹುತಾತ್ಮರ ನೆನಪಿಗಾಗಿ ಸ್ಮಾರಕ ನಿರ್ಮಿಸಬೇಕು. ನಮ್ಮ ಭಾಗದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಸಂಬಂಧಪಟ್ಟಂತೆ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಧ್ವಜಾರೋಹಣ ನೆರವೇರಿಸಿದ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ, ಕೊಪ್ಪಳ ಹಾಗೂ ಯಾದಗಿರಿ ಕಳೆದ ದಶಕಗಳಲ್ಲಿ ರಚನೆಗೊಂಡ ಜಿಲ್ಲೆಗಳು. ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿವೆ. ಈ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಮಾತನಾಡಿ, ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ನಮ್ಮ ಭಾಗದ ವಿದ್ಯಾರ್ಥಿಗಳ ಸಾಧನೆ ಕೆಳ ಮಟ್ಟದಲ್ಲಿದೆ. ಈ ಭಾಗದ ಫಲಿತಾಂಶ ಸುಧಾರಣೆಗಾಗಿ ವಿಶೇಷ ಕ್ರಮ ಕೈಗೊಳ್ಳಬೇಕು. ಶಾಲಾ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಸ್ಕೃತಿ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ ಸೊರಟೂರ, ವಿಮೋಚನಾ ಚಳವಳಿಯಲ್ಲಿ ಹುತಾತ್ಮರಾದವರ ಕುರಿತು ಮಾತನಾಡಿದರು. ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ಉಪಾಧ್ಯಕ್ಷ ಮೂರ್ತ್ಯಪ್ಪ ಹಿಟ್ನಾಳ, ಒಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಚುನಾವಣೆ ಅಧಿಕಾರಿ ಶಿವಕುಮಾರ್ ಏಣಿಗಿ ಉಪಸ್ಥಿತರಿದ್ದರು.