ಬ್ಯಾಡಗಿ ಮಾರುಕಟ್ಟೆ ಹೆಸರಿಗೆ ಕಳಂಕ ತಂದರೆ ಕ್ರಮ ನಿಶ್ಚಿತ: ಬಸವರಾಜ ಶಿವಣ್ಣನವರ

| Published : Dec 22 2024, 01:30 AM IST

ಬ್ಯಾಡಗಿ ಮಾರುಕಟ್ಟೆ ಹೆಸರಿಗೆ ಕಳಂಕ ತಂದರೆ ಕ್ರಮ ನಿಶ್ಚಿತ: ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮಾ. 11ರಂದು ಬ್ಯಾಡಗಿ ಎಪಿಎಂಸಿ ಕಚೇರಿಗೆ ರೈತರು ಬೆಂಕಿ ಹಚ್ಚಿ ದಾಂದಲೆ ನಡೆಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಜರುಗಿದ ಉನ್ನತ ಮಟ್ಟದ ಅಧಿಕಾರಿಗಳ ಹಾಗೂ ವರ್ತಕ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಯಿತು.

ಬ್ಯಾಡಗಿ: ರೈತರ ಶ್ರೇಯೋಭಿವೃದ್ಧಿ ಬಯಸುತ್ತಿರುವ ಮಾರುಕಟ್ಟೆಯ ಹೆಸರಿಗೆ ಕಳಂಕ ತರುವ ನಿಟ್ಟನಲ್ಲಿ ಯಾರೇ ಕೈಹಾಕಿದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತವೆಂದು ಶಾಸಕ ಬಸವರಾಜ ಶಿವಣ್ಣನವರ ಖಡಕ್ ಎಚ್ಚರಿಕೆ ನೀಡಿದರು.

ಕಳೆದ ಮಾ. 11ರಂದು ಎಪಿಎಂಸಿ ಕಚೇರಿಗೆ ರೈತರು ಬೆಂಕಿ ಹಚ್ಚಿ ದಾಂದಲೆ ನಡೆಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಜರುಗಿದ ಉನ್ನತ ಮಟ್ಟದ ಅಧಿಕಾರಿಗಳ ಹಾಗೂ ವರ್ತಕ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಮತ್ತು ವ್ಯಾಪಾರಸ್ಥರ ಸಹಕಾರದಿಂದ ಬ್ಯಾಡಗಿ ಮಾರುಕಟ್ಟೆ ಮೆಣಸಿನಕಾಯಿ ವಹಿವಾಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಇದೆ. ಈ ಮಾರುಕಟ್ಟೆಗೆ ಬರುವ ರೈತರಿಗೆ ತೂಕ ಮತ್ತು ವಹಿವಾಟಿನಲ್ಲಿ ಮೋಸವಾಗದಂತೆ ನೋಡಿಕೊಳ್ಳಲಾಗುತ್ತಿದೆ, ಪಾರದರ್ಶಕ ವ್ಯವಹಾರ ನಡೆಯುತ್ತಿದೆ. ಇಂತಹ ಕೀರ್ತಿಗೆ ಭಾಜನರಾಗುವುದರ ಹಿಂದೆ ರೈತರು, ದಲಾಲರು, ವರ್ತಕರು, ಕೂಲಿ ಕಾರ್ಮಿಕರ ಶ್ರಮವಿದೆ ಮಾರುಕಟ್ಟೆ ಮೂಲ ಉದ್ದೇಶಕ್ಕೆ ಧಕ್ಕೆ ತರುವವರನ್ನು ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಿಲ್ಲ ಎಂದರು.

ಕಿಡಿಗೇಡಿಗಳ ಬಗ್ಗೆ ನಿಗಾವಹಿಸಿ: ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ಮಾತನಾಡಿ, ಹಿಂದೆ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಮಾರುಕಟ್ಟೆ ಅಭ್ಯುದಯ ಸಹಿಸಲಾಗದ ಕೆಲವು ಕಿಡಿಗೇಡಿಗಳು ಮಾರುಕಟ್ಟೆ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಹಳ್ಳಿಗಳಲ್ಲಿ ಮೆಣಸಿನಕಾಯಿ ಖರೀದಿ ಮಾಡಿದ ವ್ಯಾಪಾರಿಗಳು ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಯತ್ನಿಸುತ್ತಾರೆ. ಅವರಿಗೆ ನಿರೀಕ್ಷಿತ ದರ ಸಿಗದಿದ್ದಾಗ ನಿಜವಾದ ರೈತರನ್ನು ರೊಚ್ಚಿಗೆಬ್ಬಿಸುತ್ತಾರೆ. ಮಾ. 11ರಂದು ನಡೆದ ಘಟನೆಯಲ್ಲಿ ಬಹುತೇಕ ವ್ಯಕ್ತಿಗಳು ಅಂಥವರೇ ಇರುವ ಅನುಮಾನಗಳಿವೆ. ಮಾರುಕಟ್ಟೆಗೆ ಬರುವ ರೈತರ ಬಗ್ಗೆ ದಲಾಲರು ವೈಯಕ್ತಿಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಲಾಟೆಯಲ್ಲಿ ರೌಡಿಶೀಟರ್‌ಗಳು: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿ, ಮಾ. 11ರಂದು ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ನಡೆದ ಕುಕೃತ್ಯದಲ್ಲಿ ಭಾಗಿಯಾದವರು ಆಂಧ್ರದಲ್ಲಿ ರೌಡಿಶೀಟರ್‌ ಹಾಗೂ ಕೊಲೆಗಡುಕರಿದ್ದಾರೆ. ಇದರಿಂದ ಅಮಾಯಕ ರೈತರಿಗೆ ಅನ್ಯಾಯವಾಗಿದ್ದು ಸಹಜ. ಇನ್ನೂ ಹೆಚ್ಚಿನ ತನಿಖೆ ಕೈಗೊಂಡು ನಿರಪರಾಧಿಗಳನ್ನು ಕೈಬಿಡುವ ನಿಟ್ಟಿನಲ್ಲಿ ಸರ್ಕಾರದ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಸಿಸಿ ಟಿವಿ ಅಳವಡಿಸಿಕೊಳ್ಳಿ: ಹೆಚ್ಚುವರಿ ಎಸ್ಪಿ ಶಿರೋಳಕರ ಮಾತನಾಡಿ, ಎಲ್ಲ ವರ್ತಕರು ತಮ್ಮ ಅಂಗಡಿಗಳಿಗೆ ಸಿಸಿ ಕ್ಯಾಮೆರಾ ಹಾಗೂ ಬೆಂಕಿ ನಂದಿಸುವ ಪರಿಕರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಕಳೆದ ವರ್ಷದಂತೆ ಸುಮಾರು 30 ಲಕ್ಷ ಚೀಲ ಪ್ರಸಕ್ತ ವರ್ಷ ಮಾರಾಟಕ್ಕೆ ಬರಲಿದೆ. ಹೀಗಾಗಿ ಈ ವರ್ಷವೂ ದರದಲ್ಲಿ ಸ್ವಲ್ಪ ಏರುಪೇರುಗಳಾಗಲಿದೆ. ವರ್ತಕರು ಮತ್ತು ಅವರಲ್ಲಿರುವ ಹಣಕ್ಕೆ ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು. ಅಷ್ಟಕ್ಕೂ ಟ್ರಾಫಿಕ್ ಸಮಸ್ಯೆಯಿಂದ ಈಗಾಗಲೇ ಮಾರುಕಟ್ಟೆ ನಲುಗಿದೆ. ಪ್ರತ್ಯೇಕ ಪೊಲೀಸ್‌ ಚೌಕಿ ಹಾಗೂ ಏಕಮುಖ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್‌ ಫಿರೋಜ್ ಶಾ, ಎಪಿಎಂಸಿ ಕಾರ್ಯದರ್ಶಿ ಶೈಲಜಾ, ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಅರವಿಂದ, ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್. ನದಾಫ್, ಉಳಿವೆಪ್ಪ ಕಬ್ಬೂರ, ಕಾರ್ಯದರ್ಶಿ ರಾಜು ಮೋರಿಗೇರಿ, ಸದಸ್ಯರಾದ ಎನ್.ಎಂ. ಕೆಂಬಿ, ದತ್ತಾತ್ರೇಯ ಸಾಳುಂಕೆ, ಎಂ.ಬಿ. ಹುಚಗೊಂಡರ, ಎನ್.ಎಚ್. ಹುಗ್ಗಿ, ಚಂದ್ರಶೇಖರ ಅಂಗಡಿ, ಎಂ.ಟಿ. ಹಾವೇರಿ, ಶೈಲೇಶ ಬೂದಿಹಾಳಮಠ ಉಪಸ್ಥಿತರಿದ್ದರು.ಇತ್ತೀಚೆಗೆ ರೈತರಿಗೆ ಹಣ ಸರಿಯಾಗಿ ತಲುಪಿಸದೇ ಇರುವ ಪ್ರಕರಣಗಳು ಹೆಚ್ಚಾಗಿದ್ದು, ಮಾರುಕಟ್ಟೆ ಹೆಸರಿಗೆ ಕಳಂಕ ಬರುತ್ತಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಣ ತಲುಪಿಸದ ಅಂಗಡಿಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಮೂಲಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರ್ತಕ ಸಂಘದ ಸದಸ್ಯ ಬಿ.ಎಂ. ಛತ್ರದ ಹೇಳಿದರು.