ಸಾರಾಂಶ
ಸಿ.ಟಿ.ರವಿ ಅವರ ವಿಪ ಸದಸ್ಯತ್ವ ವಜಾಗೆ ಆಗ್ರಹಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿ ಸಂಘದ ವತಿಯಿಂದ ಶನಿವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಸಾಂವಿಧಾನಿಕ ಶಬ್ದ ಬಳಸಿ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳ ಸಂಘದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸಿ.ಟಿ.ರವಿ ಅವರನ್ನು ವಿಪ ಸದಸ್ಯತ್ವದಿಂದ ವಜಾ ಮಾಡುವಂತೆ ಆಗ್ರಹಿಸಿದರು.ಚಳಿಗಾಲದ ಅಧಿವೇಶನದ ಕೊನೆಯ ದಿನ ಸಿ.ಟಿ.ರವಿ ಆಡಿರುವ ಮಾತು ಲಕ್ಷ್ಮಿ ಹೆಬ್ಬಾಳ್ಕರ್ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಆದ್ದರಿಂದ ಸಿ.ಟಿ.ರವಿಯನ್ನು ವಿಧಾನ ಪರಿಷತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಜೈಲಿಗಟ್ಟಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಹೆಸರೇಳುವ ಬದಲು ದೇವರ ಹೆಸರು ಜಪಿಸಿ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಹೇಳಿರುವ ಬೆನ್ನ ಹಿಂದೆಯೆ ಸಿ.ಟಿ.ರವಿ ಅಸಭ್ಯವಾಗಿ ಮಾತನಾಡಿರುವುದನ್ನು ನೋಡಿದರೆ ಇವರಿಬ್ಬರು ಮನುಸಂಸ್ಕೃತಿಯವರು ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ಇವರನ್ನು ತಕ್ಷಣವೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕರವೇ ರಮೇಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ಹನೀಸ್, ಕಾರ್ತಿಕ್, ಮೋಕ್ಷರುದ್ರಸ್ವಾಮಿ, ಮುನಿರಾ ಎ.ಮಕಾಂದಾರ್, ವಿಜಯಕುಮಾರ್, ನೇತ್ರಾವತಿ ಕುಮಾರ್, ಗಿರೀಶ್, ಜಗದೀಶ್, ದರ್ಶನ್, ಸುನಿತ ಪ್ರತಿಭಟನೆ ನೇತೃತ್ವ ವಹಿಸಿದ್ದರು.