ವಿದ್ಯಾರ್ಥಿಯೊಳಗಿನ ವಿಜ್ಞಾನಿ ಹೊರಬರಲು ವಸ್ತುಪ್ರದರ್ಶನ ಸಹಕಾರಿ

| Published : Dec 22 2024, 01:30 AM IST

ವಿದ್ಯಾರ್ಥಿಯೊಳಗಿನ ವಿಜ್ಞಾನಿ ಹೊರಬರಲು ವಸ್ತುಪ್ರದರ್ಶನ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ವಿಗ್ಯಾನ್ ವಿಕಸನ್ - ೨೦೨೪ ಅನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಭವಿಷ್ಯದ ಭಾವಿ ವಿಜ್ಞಾನಿಗಳನ್ನು ಶಾಲಾ ಹಂತದಿಂದಲೇ ಗುರುತಿಸಿ, ಅವರನ್ನು ಪ್ರೋತ್ಸಾಹಿಸಬೇಕು ಹಾಗೂ ವಿಜ್ಞಾನವನ್ನು ವಿದ್ಯಾರ್ಥಿಗಳ ದೈನಂದಿನ ಜೀವನಕ್ಕೆ ಅನ್ವಯಿಸಿ ಪರಿಣಾಮಕಾರಿಯಾಗಿ ಬೋಧಿಸಿ, ಅವರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಬೇಕೆಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ವಿಗ್ಯಾನ್ ವಿಕಸನ್ - ೨೦೨೪ ಅನ್ನು ಆಯೋಜಿಸಲಾಗಿತ್ತು.

ಹಾಸನದ ವಿಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದಂತ ವೈದ್ಯ ಡಾ. ವೈಭವ್ ಅವರು ವಿಗ್ಯಾನ್ ವಿಕಸನ್‌ನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಕರು ಹಾಗೂ ಪೋಷಕರ ಮಾರ್ಗದರ್ಶನದಿಂದ ಮಕ್ಕಳು ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬಳಸಿ ವಿಜ್ಞಾನದ ಮಾದರಿಗಳನ್ನು ತಯಾರಿಸುವುದರಿಂದ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಆಸಕ್ತಿ ಬೆಳೆದು ಭವಿಷ್ಯದಲ್ಲಿ ಅವರು ವಿಜ್ಞಾನಿಗಳಾಗುವಲ್ಲಿ ಬುನಾದಿಯಾಗುತ್ತದೆ. ವಿಜ್ಞಾನ ಕ್ಷೇತ್ರ ಶರವೇಗದಲ್ಲಿ ಬೆಳೆಯುತ್ತಿದ್ದು, ಅನ್ವೇಷಣೆ ಮತ್ತು ಸಂಶೋಧನೆಗಳಿಗೆ ವಿಫುಲ ಅವಕಾಶಗಳಿರುವುದರಿಂದ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಪ್ರತಿಯೊಂದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಪ್ರಶ್ನೆಗಳ ಮೂಲಕ ತಾರ್ಕಿಕವಾಗಿ ವಿಜ್ಞಾನದ ಪರಿಕಲ್ಪನೆಗಳನ್ನು ಮನನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರತಿ ವಿದ್ಯಾರ್ಥಿಯೊಳಗೊಬ್ಬ ವಿಜ್ಞಾನಿಯಿದ್ದು ಆ ವಿಜ್ಞಾನಿಯನ್ನು ಹೊರತಲು ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಭೂಮಿಕೆಯಾಗುತ್ತವೆ. ಶಿಕ್ಷಕರು ಭವಿಷ್ಯದ ಭಾವಿ ವಿಜ್ಞಾನಿಗಳನ್ನು ಶಾಲಾ ಹಂತದಿಂದಲೇ ಗುರುತಿಸಿ, ಅವರನ್ನು ಪ್ರೋತ್ಸಾಹಿಸಬೇಕು ಹಾಗೂ ವಿಜ್ಞಾನವನ್ನು ವಿದ್ಯಾರ್ಥಿಗಳ ದೈನಂದಿನ ಜೀವನಕ್ಕೆ ಅನ್ವಯಿಸಿ ಪರಿಣಾಮಕಾರಿಯಾಗಿ ಬೋಧಿಸಿ, ಅವರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಬೇಕೆಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷ ಆರ್. ರಾಜಗೋಪಾಲ ಶೆಟ್ಟಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳೇ ವಿಜ್ಞಾನದ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸುವುದರಿಂದ ಅವರಲ್ಲಿ ವೈಜ್ಞಾನಿಕ ಆಲೋಚನೆ, ಮನೋ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ಹೊರಹೊಮ್ಮಿಸಿ, ತಾರ್ಕಿಕ ಚಿಂತನೆಯ ಮೂಲಕ ಕಲಿಕೆಯನ್ನು ಅರ್ಥಪೂರ್ಣಗೊಳಿಸಲು ಸಹಾಯಕವಾಗುತ್ತದೆ. ಭವಿಷ್ಯದ ವಿಜ್ಞಾನಿಗಳು ಇಂದಿನ ಶಾಲೆಗಳಲ್ಲಿ ರೂಪುಗೊಳ್ಳುವುದರಿಂದ ಕಿರಿಯ ವಿಜ್ಞಾನಿಗಳ ಪ್ರತಿಭೆಗಳನ್ನು ಅನಾವರಣಗೊಳಿಸಿ, ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಸೌರಶಕ್ತಿಯನ್ನು ಬಳಸಿ ವಿದ್ಯುಚ್ಛಕ್ತಿ ಉಳಿಸುವಂತಹ ಮಾದರಿಗಳು, ಮಳೆ ನೀರು ಕೊಯ್ಲು, ವೈಜ್ಞಾನಿಕ ಆವಿಷ್ಕಾರಗಳಾದ ಹೈಡ್ರೋಫೋನಿಕ್ಸ್, ಅಕ್ವಾಫೋನಿಕ್ಸ್, ವಿವಿಧ ಸೆನ್ಸಾರ್ ಮಾದರಿಗಳು, ರಾಸಾಯನಿಕಗಳಿಂದ ಆರೋಗ್ಯದ ಮೇಲಾಗುವ ಪರಿಣಾಮ, ರೇಡಾರ್‌ಗಳ ಬಳಕೆ, ವನ್ಯಜೀವಿಗಳ ಸಂರಕ್ಷಣೆ, ಭೂಮಿಯ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ, ಪರಿಸರ ಮಾಲಿನ್ಯ ನಿರ್ವಹಣೆ ಮತ್ತು ನಿಯಂತ್ರಣ, ಪೌಷ್ಠಿಕ ಆಹಾರ, ತ್ಯಾಜ್ಯವಸ್ತುಗಳ ನಿರ್ವಹಣೆ ಮತ್ತು ಪುನರ್ ಬಳಕೆ, ನೀರಿನ ಸಂರಕ್ಷಣೆ, ರಾಕೆಟ್ ಉಡಾವಣೆ, ಉಪಗ್ರಹ ನಿಯಂತ್ರಣ, ಮಾನವನ ಶರೀರ ರಚನೆ, ಆಹಾರ ಪಿರಮಿಡ್, ಹಗಲು ಹಾಗೂ ರಾತ್ರಿ ಉಂಟಾಗುವಿಕೆ, ಸ್ಮಾರ್ಟ್ ಸಿಟಿ ಪರಿಕಲ್ಪನೆ, ಲೇಸರ್ ಸೆಕ್ಯೂರಿಟಿ, ಸೋಲಾರ್ ನಿಯಂತ್ರಿತ ನೀರಾವರಿ, ಹೈಡ್ರಾಲಿಕ್ ಬ್ರಿಡ್ಜ್, ಬ್ಲೂಟೂತ್ ನಿಯಂತ್ರಿತ ವಾಹನಗಳು, ರಸ್ತೆ ಅಪಘಾತಗಳನ್ನು ತಡೆಯಲು ವಾಹನಗಳ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಮುಂತಾದ ವೈಜ್ಞಾನಿಕ ಆವಿಷ್ಕಾರಗಳನ್ನು ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸುವಲ್ಲಿ ಯುವ ವಿಜ್ಞಾನಿಗಳು ಯಶಸ್ವಿಯಾದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ೬೦೦ಕ್ಕೂ ಹೆಚ್ಚಿನ ವಿವಿಧ ಮಾದರಿಗಳು ಪ್ರದರ್ಶನಗೊಂಡು ಆಗಮಿಸಿದ್ದ ಪೋಷಕರು ಹಾಗೂ ಸಾರ್ವಜನಿಕರಿಂದ ಪ್ರಶಂಸೆಗೊಳಗಾದವು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ನಟರಾಜ್, ಟ್ರಸ್ಟಿ ಆಶಾ ನಟರಾಜ್ , ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

--------