ಸಾರಾಂಶ
೨೦೨೪ರಲ್ಲಿ ಸುಮಾರು ಹೆಣ್ಣುಮಕ್ಕಳು ಕಾಣೆಯಾದ ೪೦ ಪ್ರಕರಣಗಳಾಗಿದ್ದು, ಅದರಲ್ಲಿ ೩೮ ಪ್ರಕರಣ ಪತ್ತೆ ಹಚ್ಚಿ ಕರೆತರಲಾಗಿದೆ.
ಮುಂಡಗೋಡ: ಮೀಟರ್ ಬಡ್ಡಿ ದೌರ್ಜನ್ಯ, ದಬ್ಬಾಳಿಕೆಗೆ ಕಡಿವಾಣ ಹಾಕಲಾಗುವುದು. ಈಗಾಗಲೇ ೩ ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ತಿಳಿಸಿದರು.ಸೋಮವಾರ ಸಂಜೆ ಇಲ್ಲಿಯ ದೈವಜ್ಞ ಕಲ್ಯಾಣಮಂಟಪದಲ್ಲಿ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮೊಟೊ ಕೇಸ್ಗೆ ನ್ಯಾಯಾಲಯದಲ್ಲಿ ಪ್ರಾಮುಖ್ಯತೆ ಸಿಗುವುದಿಲ್ಲ. ಹಾಗಾಗಿ ನೊಂದವರು ಪೊಲೀಸ್ ಠಾಣೆಗೆ ಬರಲು ಆಗದೆ ಇದ್ದರೂ ಕನಿಷ್ಠ ಪಕ್ಷ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ದುಡಿದ ಹಣವನ್ನೆಲ್ಲ ಬಡ್ಡಿ ನೀಡಿದರೆ ಬದುಕು ಸಾಗಿಸುವುದು ಕಷ್ಟ ಸಾಧ್ಯವಾಗುತ್ತದೆ. ನೊಂದವರು ದೂರು ನೀಡಿದ ತಕ್ಷಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾಹಿತಿ ನೀಡಲು ಯಾರು ಕೂಡ ಹಿಂದೇಟು ಹಾಕುವ ಅವಶ್ಯಕತೆ ಇಲ್ಲ. ಯಾರೇ ದೂರು ನೀಡಿದರೂ ಅದರ ಬಗ್ಗೆ ಗೌಪ್ಯವಾಗಿಟ್ಟು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
೨೦೨೪ರಲ್ಲಿ ಸುಮಾರು ಹೆಣ್ಣುಮಕ್ಕಳು ಕಾಣೆಯಾದ ೪೦ ಪ್ರಕರಣಗಳಾಗಿದ್ದು, ಅದರಲ್ಲಿ ೩೮ ಪ್ರಕರಣ ಪತ್ತೆ ಹಚ್ಚಿ ಕರೆತರಲಾಗಿದೆ. ಈವರೆಗೆ ಸಾವಿರಾರು ಶಾಲಾ- ಕಾಲೇಜುಗಳಲ್ಲಿ ಅಪರಾಧ ತಡೆಗಟ್ಟುವ ದೃಷ್ಟಿಯಿಂದ ಮಕ್ಕಳಿಗೆ ಜಾಗ್ರತೆ ಮೂಡಿಸುವಂತ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ಟ್ರಾಫಿಕ್ ಪರಿಹರಿಸಲು ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಸಾರ್ವಜನಿಕರೇ ಪರಿಹರಿಸಿಕೊಳ್ಳಬಹುದು. ಕಾನೂನು ಪಾಲನೆ ಮಾಡಿದರೆ ತಾನಾಗಿಯೇ ಪರಿಹಾರವಾಗುತ್ತದೆ. ವಾಹನ ಚಾಲನೆ ಮಾಡುವುದೊಂದೆ ಮುಖ್ಯವಲ್ಲ. ಅಗತ್ಯ ಪರವಾನಗಿ, ವಿಮೆ ಎಲ್ಲವನ್ನು ನಮ್ಮ ರಕ್ಷಣೆಗಾಗಿ ಎಂಬುವುದು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸಲಹೆ ನೀಡಿದರೆ ಪೊಲೀಸ್ ಇಲಾಖೆ ನಿಮ್ಮ ಜತೆ ಸದಾ ಇರುತ್ತದೆ ಎಂದರು.ಜನಸಾಮಾನ್ಯರ ರಕ್ಷಣೆ ನಮ್ಮ ಕರ್ತವ್ಯ ಪೊಲೀಸ್ ಇಲಾಖೆಯದ್ದಾಗಿದ್ದು, ಸಾರ್ವಜನಿಕರಿಂದ ದೂಷಣೆ ಬಂದರೆ ಅದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುವ ಇಲಾಖೆ ಕೂಡ ನಮ್ಮದು. ನಮ್ಮ ಅವಧಿಯಲ್ಲಿ ಈಗಾಗಲೇ ಮಟ್ಕಾಕ್ಕೆ ಸಂಬಂಧಿಸಿದಂತೆ ೪೦೦ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಜೂಜಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಕಳ್ಳತನ ಪ್ರಕರಣ ತಡೆಯುವಲ್ಲಿ ಕೂಡ ಸಾರ್ವಜನಿಕರು ಮುಂಜಾಗ್ರತೆ ವಹಿಸಿದರೆ ಇದನ್ನು ಕೂಡ ತಡೆಗಟ್ಟಬಹುದು.ಮೀಟರ್ ಬಡ್ಡಿ ಹಾವಳಿ, ಟ್ರಾಫಿಕ್ ಜಾಮ್, ಬಿಡಾಡಿ ದನಗಳ ಹಾವಳಿ ಹೆಚ್ಚಿದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದವು. ಅಲ್ಲದೇ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂಬುವುದರ ಬಗ್ಗೆ ಒತ್ತಾಯ ಕೇಳಿಬಂದವು. ಈ ಸಂದರ್ಭದಲ್ಲಿ ಹಲವರಿಂದ ಮನವಿ ಸ್ವೀಕರಿಸಲಾಯಿತು.ಶಿರಸಿ ಡಿವೈಎಸ್ಪಿ ಕೆ.ಎಲ್. ಗಣೇಶ, ಮುಂಡಗೋಡ ಠಾಣೆ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್ಐ ಪರಶುರಾಮ ಮಿರ್ಜಗಿ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ರವಿಗೌಡ ಪಾಟೀಲ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ದಲಿತ ಸಂಘಟನೆಯ ಮುಖಂಡರಾದ ಬಸವರಾಜ ಸಂಗಮೇಶ್ವರ, ಎಸ್. ಫಕ್ಕೀರಪ್ಪ, ಚಿದಾನಂದ ಹರಿಜನ, ಬಿಜೆಪಿ ಮುಖಂಡ ಮಂಜುನಾಥ ಪಾಟೀಲ, ವಕೀಲ ಗುಡ್ಡಪ್ಪ ಕಾತೂರ ಮುಂತಾದವರು ಉಪಸ್ಥಿತರಿದ್ದರು.