ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ವರದಿ ವರ್ಷದಲ್ಲಿ ಒಟ್ಟು ೧೦೯೩.೮೩ ಕೋಟಿ ರು. ವ್ಯವಹಾರ ನಡೆಸಿ ೨.೬೦ ಕೋಟಿ ರು. ಲಾಭ ಗಳಿಸಿದೆ. ಸದಸ್ಯರಿಗೆ ಶೇ. ೧೯ ಡಿವಿಡೆಂಡ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸಂಘದ ಹೆಸರನ್ನು ಆದರ್ಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಎಂದು ಬದಲಾವಣೆ ಮಾಡಿಕೊಳ್ಳಲಾಗುತ್ತಿದ್ದು, ಸಂಘವು ನೇರವಾಗಿ ಸರಕಾರದ ಅಧೀನಕ್ಕೆ ಬರಲಿದೆ. ಮುಂದಿನ ೨-೩ ವರ್ಷಗಳಲ್ಲಿ ಸದಸ್ಯರಿಗೆ ಶೇ. ೨೫ ಡಿವಿಡೆಂಡ್ ನೀಡುವ ಮಟ್ಟಕ್ಕೆ ಸಂಘವನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಹೇಳಿದರು. ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯು ಶನಿವಾರ ಪುತ್ತೂರು ನಗರದ ದರ್ಬೆ ಪ್ರಶಾಂತ್ ಮಹಲ್‌ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವನ್ನು ಉಡುಪಿ, ಮಡಿಕೇರಿಗೆ ವಿಸ್ತರಣೆ ಮಾಡಲು ಅನುಮತಿ ಪಡೆದುಕೊಳ್ಳಲಾಗಿದೆ. ಮುಂದಿನ ಡಿಸೆಂಬರ್‌ನಲ್ಲಿ ಮಡಿಕೇರಿಯಲ್ಲಿ ನೂತನ ಶಾಖೆಯನ್ನು ತೆರೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದೆ ೨-೩ ಶಾಖೆ ತೆರೆದು ಬಳಿಕ ವಿಸ್ತರಣೆ ನಿಲ್ಲಿಸಿ ವಾರ್ಷಿಕ ೧೦ ಕೋಟಿ ರು. ಲಾಭದ ಯೋಜನೆ ರೂಪಿಸಿದ ಬಳಿಕ ಶಾಖೆಗಳ ಬಗ್ಗೆ ಯೋಚಿಸಲಾಗುವುದು.
ಸಂಘಕ್ಕೆ ಸವಣೂರಿನ ಸ್ವಂತ ನಿವೇಶನದಲ್ಲಿ ಸುಮಾರು ೬ ಕೋಟಿ ರು. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಶೀಘ್ರದಲ್ಲಿ ರಜತ ಸಂಭ್ರಮದ ಜೊತೆಗೆ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ನೆರವೇರಿಸಲು ಪ್ರಯತ್ನಗಳು ನಡೆಯುತ್ತಿವೆ. ಸಂಘದ ಸದಸ್ಯರ ೫೦ ಲಕ್ಷ ರು. ಸಾಲದ ಮಿತಿಯನ್ನು ೧ ಕೋಟಿ ರು. ಹಾಗೂ ಚಿನ್ನಾಭರಣ ಸಾಲದ ಮಿತಿಯನ್ನು ೨೫ ಲಕ್ಷದಿಂದ ೫೦ ಲಕ್ಷ ರು.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉತ್ತಮ ನಿರ್ವಹಣೆ ತೋರಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಾರೆ, ಕುಂಬ್ರ ಮತ್ತು ಸವಣೂರು ಶಾಖೆಗಳ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತರಾದ ಮನೋಜ್ ಕುಮಾರ್ ಹಾಗೂ ಸುರೇಖಾ ಬಿ. ಅವರನ್ನು ಬೀಳ್ಕೊಡಲಾಯಿತು. ಉತ್ತಮ ಪ್ರದರ್ಶನ ತೋರಿದ ಶಾಖೆಗಳಿಗೆ ಬಹುಮಾನ ನೀಡಲಾಯಿತು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ಬಿ. ಮಹಾಬಲ ರೈ ಬೋಳಂತೂರು, ಜಯಪ್ರಕಾಶ್ ರೈ ಚೊಕ್ಕಾಡಿ, ಅಡ್ವೊಕೇಟ್ ಅಶ್ವಿನ್ ಎಲ್. ಶೆಟ್ಟಿ ಸವಣೂರು, ಎಸ್.ಎಂ. ಬಾಪು ಸಾಹೇಬ್, ಕೆ. ರವೀಂದ್ರನಾಥ ಶೆಟ್ಟಿ ಕೇನ್ಯ, ಎನ್. ರಾಮಯ್ಯ ರೈ ಕೆದಂಬಾಡಿ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಬಿ. ಮಂಗಳೂರು, ವಿ.ವಿ. ನಾರಾಯಣ ಭಟ್ ನರಿಮೊಗರು, ಜೈರಾಜ್ ಭಂಡಾರಿ ಪುತ್ತೂರು, ಮಹಾದೇವ ಎಂ. ಮಂಗಳೂರು, ಪೂರ್ಣಿಮಾ ಎಸ್. ಆಳ್ವ, ಯಮುನಾ ಎಸ್. ರೈ ಗುತ್ತುಪಾಲ್, ರಶ್ಮಿ ಎಸ್. ರೈ ಉಪಸ್ಥಿತರಿದ್ದರು.
ಸಂಘದ ಮಹಾ ಪ್ರಬಂಧಕ ವಸಂತ್ ಜಾಲಾಡಿ ವಾರ್ಷಿಕ ವರದಿ ಮಂಡಿಸಿದರು. ಎಜಿಎಂ ಸುನಾದ್ ರಾಜ್ ಶೆಟ್ಟಿ ಕಳೆದ ಮಹಾಸಭೆಯ ನಡಾವಳಿ ಹಾಗೂ ಪುತ್ತೂರು ಶಾಖಾ ಪ್ರಬಂಧಕ ಪವನ್ ತಿಳಿವಳಿಕೆ ಪತ್ರ ಮಂಡಿಸಿದರು. ಮಾರಾಟ ಅಧಿಕಾರಿ ಶ್ರೀಧರ ಪೂಜಾರಿ ವಂದಿಸಿದರು.