ಸಾರಾಂಶ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
12ನೇ ಶತಮಾನದಲ್ಲಿ ಬಾಳಿ ಬದುಕಿ ಮಾದರಿಯಾದ ಶರಣರ, ಸಂತರ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ರಾಜ್ಯ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗರಾಜ ಅರಳಿ ಹೇಳಿದರು.ಸೋಮವಾರ ಸಂಜೆ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಸಿದ್ದೇಶ್ವರ ಸತ್ಸಂಗ ಬಳಗ, ಶರಣ ಸಾಹಿತ್ಯ ಪರಿಷತ್ತು, ಮಹಿಳಾ ಕದಳಿ ವೇದಿಕೆ, ರಾಜ ರಾಜೇಶ್ವರಿ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕ ಬಿಂಕದಕಟ್ಟಿ ಅಭಿಮಾನಿ ಬಳಗದಿಂದ ಸಂಯಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶ್ರಾವಣ ಮಾಸದ ತಿಂಗಳು ಪರ್ಯಂತ ನಡೆಯುವ ಶ್ರಾವಣ ಸಂಜೆಯ 19ನೇ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಾವಣ ಮಾಸದಲ್ಲಿ ಶರಣರ ವಚನಗಳನ್ನು, ಅನುಭಾವಿಗಳ ನುಡಿಗಳನ್ನು, ಸಂತರ ನಡೆ ನುಡಿಗಳನ್ನು ಆಲಿಸುವ ಮೂಲಕ ಅವುಗಳನ್ನು ಎಳ್ಳಷ್ಟಾದರೂ ನಾವು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.ಶರಣರ ಉಪದೇಶಗಳನ್ನು ಕೇಳಿ ಮನೆಗೆ ಹೋಗುವುದಲ್ಲ. ಮನ, ಮನೆಗಳಲ್ಲಿ ಅವುಗಳನ್ನು ಆಚರಣೆಗೆ ತಂದಲ್ಲಿ ಸಮಾಜದಲ್ಲಿನ ಲೋಪದೋಷಗಳು ತಮ್ಮಷ್ಟಕ್ಕೆ ತಾವೇ ದೂರವಾಗುತ್ತವೆ. ಶರಣರ ನುಡಿಗಳನ್ನು ಕೇವಲ ಹೇಳುವುದಕಷ್ಟೇ ಸೀಮಿತವೆಂದು ಭಾವಿಸಿದ್ದೇವೆ. ಆದರೆ ಅವುಗಳನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಜೀವನ ಹೂವಿನ ಹಾಸಿಗೆಯಾಗುವುದರಲ್ಲಿ ಎರಡು ಮಾತಿಲ್ಲ. ನಮ್ಮ ಶರಣರು ಕನ್ನಡ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಶರಣರು ತಾವು ಕೇವಲ ಆಡಿ ತೋರಿಸಲಿಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ನಡೆ ನುಡಿ ಒಂದಾದಲ್ಲಿ ನಮ್ಮ ಬಾಳು ಹಸನಾಗುತ್ತದೆ. ಶರಣರು ನಮ್ಮ ನಾಡಿಗೆ ನೀಡಿದ ವಚನ ಸಾಹಿತ್ಯದ ಅಮೂಲ್ಯ ಕೊಡುಗೆಯನ್ನು ಕೇವಲ ಓದಿ ಸುಮ್ಮನಾಗದೇ ಅವುಗಳನ್ನು ಆಚರಣೆಗೆ ತರುವ ಮೂಲಕ ಪ್ರಪಂಚಕ್ಕೆ ಅವರ ಆದರ್ಶಗಳನ್ನು ತೋರಿಸುವ ಕೆಲಸ ಮಾಡೋಣ ಎಂದು ಹೇಳಿದರು.ಸಭೆಯಲ್ಲಿ ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಶರಣರ ಸಾಮಾಜಿಕ ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಪೂರ್ಣಾಜಿ ಖರಾಟೆ, ಚಂದ್ರಣ್ಣ ಮಹಾಜನಶೆಟ್ಟರ, ಅಗಡಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪರಶುರಾಮ ಬಾರ್ಕಿ ಮಾತನಾಡಿದರು.ಲಲಿತಾ ಕೆರಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಅಶೋಕ ಸೊರಟೂರ, ಡಾ.ಶಿವಾನಂದ ಹೂವಿನ, ಸಿ.ಜಿ. ಹಿರೇಮಠ, ಗಂಗಾಧರ ಅರಳಿ, ಮಹಾಬಳೇಶ್ವರಪ್ಪ ಬೇವಿನಮರದ, ಎನ್.ಆರ್. ಸಾತಪೂತೆ, ಬಸವರಾಜ ಬಾಳೇಶ್ವರಮಠ, ಈಶ್ವರ ಮೆಡ್ಲೇರಿ, ಸೋಮಶೇಖರ ಕೆರಿಮನಿ, ನಿಂಗಪ್ಪ ಗೊರವರ, ಅಶ್ವಿನಿ ಅಂಕಲಕೋಟಿ, ನಂದಾ ಮಾಳವಾಡ, ಮಹಾನಂದಾ ಕೊಣ್ಣೂರ, ಶಾರದಾ ಬಟಗುರ್ಕಿ, ಚೈತ್ರಾ ಹಣಗಿ, ಶಶಿಕಲಾ ವಡಕಣ್ಣವರ, ಸೌಭಾಗ್ಯ ಬಿಂಕದಕಟ್ಟಿ, ಲಲಿತಾ ತಟ್ಟಿ, ಅಂಕಿತಾ ಅರಳಿ, ರೇಖಾ ವಡಕಣ್ಣವರ ಇದ್ದರು.ನಿರ್ಮಲಾ ಅರಳಿ ಸ್ವಾಗತಿಸಿದರು. ರತ್ನಾ ಕರ್ಕಿ ಕಾರ್ಯಕ್ರಮ ನಿರ್ವಹಿಸಿದರು. ಎಂ.ಕೆ. ಕಳ್ಳಿಮಠ ವಂದಿಸಿದರು. ಪ್ರತಿಮಾ ಮಹಾಜನಶೆಟ್ಟರ ಪ್ರಾರ್ಥಿಸಿದರು.