ಸಾರಾಂಶ
ಸಂತೋಷ ದೈವಜ್ಞ
ಮುಂಡಗೋಡ: ತಾಲೂಕಿನ ಶಿರಸಿ- ಹುಬ್ಬಳ್ಳಿ(ಕುಮಟಾ- ತಡಸ) ರಾಜ್ಯ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹೊಂಡಗಳಿಂದ ಕೂಡಿದ್ದು, ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.ಮುಂಡಗೋಡದಿಂದ ಶಿರಸಿ, ಹುಬ್ಬಳ್ಳಿ ಹಾಗೂ ಯಲ್ಲಾಪುರಕ್ಕೆ ಹೋಗುವಾಗ ಮಾರ್ಗದುದ್ದಕ್ಕೂ ಬಿದ್ದಿರುವ ಹೊಂಡಗಳು ಪ್ರಯಾಣಿಕರನ್ನು ಸ್ವಾಗತಿಸುತ್ತವೆ. ಮುಂಡಗೋಡದಿಂದ ಶಿರಸಿ ಅಥವಾ ಹುಬ್ಬಳ್ಳಿಗೆ ಒಂದು ಗಂಟೆಯೊಳಗೆ ತಲುಪಬಹುದಿತ್ತು. ಆದರೆ ಮಾರ್ಗದುದ್ದಕ್ಕೂ ಹೊಂಡ ನಿರ್ಮಾಣವಾಗಿದ್ದು, ಸಂಪೂರ್ಣ ಕೆಸರು ಗದ್ದೆಯಂತಾಗಿರುವುದರಿಂದ ಕನಿಷ್ಠ ಒಂದೂವರೆ ಗಂಟೆಯಾದರೂ ಬೇಕು. ರಸ್ತೆಯಲ್ಲಿ ಹೊಂಡಗಳಿವೆಯೊ ಅಥವಾ ಹೊಂಡಗಳಲ್ಲಿ ರಸ್ತೆ ಇದೆಯೋ ಎಂಬ ಅನುಮಾನ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಗಬೇಕಿದೆ. ಈ ಮಾರ್ಗವಾಗಿ ಸಂಚರಿಸುವವರ ಸ್ಥಿತಿ ಆ ದೇವರಿಗೆ ಪ್ರೀತಿ. ಮುಂಡಗೋಡ- ಯಲ್ಲಾಪುರ, ಮುಂಡಗೋಡ- ಬಂಕಾಪುರ, ಪಾಳಾ- ಹಾನಗಲ್ಲ ರಸ್ತೆ ಸೇರಿದಂತೆ ಬಹುತೇಕ ಹೆದ್ದಾರಿಗಳ ಸ್ಥಿತಿ ಕೂಡ ಭಿನ್ನವಾಗಿಲ್ಲ. ಚಾಲಕರಿಗೆ ಈ ಮಾರ್ಗವಾಗಿ ಸಂಚರಿಸುವುದೇ ಹಿಂಸೆಯಾಗಿ ಪರಿಣಮಿಸಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತ ಪ್ರಯಾಣಿಸುತ್ತಾರೆ. ರಸ್ತೆಗಳು ಇಷ್ಟೊಂದು ಹದಗೆಟ್ಟರೂ ನಿರ್ವಹಣೆಗೆ ಮುಂದಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
೧೨ ವರ್ಷದಿಂದ ಡಾಂಬರೀಕರಣ ಆಗಿಲ್ಲ: ೨೦೧೧- ೧೨ನೇ ಸಾಲಿನಲ್ಲಿ ಡಾಂಬರೀಕರಣವಾದ ಶಿರಸಿ- ಹುಬ್ಬಳ್ಳಿ ರಸ್ತೆ ೧೨ ವರ್ಷ ಕಳೆದರೂ ಮರುಡಾಂಬರಿಕರಣ ಮಾಡಲಾಗಿಲ್ಲ. ಪ್ರತಿವರ್ಷ ಮಳೆಗಾಲ ಮುಗಿದ ತಕ್ಷಣ ದುರಸ್ತಿ ಹಾಗೂ ನಿರ್ವಹಣೆ ಹೆಸರಲ್ಲಿ ತೇಪೆ ಹಚ್ಚುವ ಕೆಲಸ ಮಾಡಿ ಕೋಟ್ಯಂತರ ರುಪಾಯಿ ಖರ್ಚು ಹಾಕುತ್ತ ಬರಲಾಗಿದೆ ವಿನಾ ಮರುಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ.ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಿರ್ವಹಣಾ ಟೆಂಡರ್: ವಾರ್ಷಿಕ ರಸ್ತೆ ನಿರ್ವಹಣಾ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ದುರಸ್ತಿ ಕಾರ್ಯ ಪ್ರಾರಂಭವಾಗಲಿದೆ. ಸದ್ಯ ಮಳೆ ಇರುವುದರಿಂದ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುವುದು. ಮಳೆಗಾಲ ಮುಗಿದ ಬಳಿಕ ಡಾಂಬರೀಕರಣ ಮಾಡಲಾಗುವುದು ಎಂದು ಮುಂಡಗೋಡ ಲೊಕೋಪಯೋಗಿ ಇಲಾಖೆ ಎಇಇ ಮಹಾದೇವಪ್ಪ ತಿಳಿಸಿದರು.ಮರುಡಾಂಬರೀಕರಣ: ಶಿರಸಿ- ಹುಬ್ಬಳ್ಳಿ, ಪಾಳಾ- ಹಾನಗಲ್ಲ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ತಿರುಗಾಡದಷ್ಟು ದುಸ್ಥಿತಿಗೆ ತಲುಪಿವೆ. ಇದರಿಂದ ನಿತ್ಯ ಬಹಳಷ್ಟು ವಾಹನ ಅಪಘಾತಗಳು ಜರುಗುತ್ತಿದ್ದು, ತಕ್ಷಣ ಗುಂಡಿಗಳನ್ನು ಮುಚ್ಚಬೇಕು. ಮಳೆಗಾಲ ಮುಗಿದ ಬಳಿಕ ಈ ರಸ್ತೆಗಳನ್ನು ಸಂಪೂರ್ಣ ಮರುಡಾಂಬರೀಕರಣ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ವಿ. ಪಾಟೀಲ ಆಗ್ರಹಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))