ಸಾರಾಂಶ
ಕುಷ್ಟಗಿ:
ತಾಲೂಕಿನ ಕೊರಡಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದತ್ತು ಗ್ರಾಮ ಜಿ. ಬೆಂಚಮಟ್ಟಿ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಪಂ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ, ಸುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಸಕಲ ಜೀವಿಗಳು ಆರೋಗ್ಯವಾಗಿ ಜೀವಿಸಲು ಸಾಧ್ಯ. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಉತ್ತಮ ಭವಿಷ್ಯದ ದಿನಗಳಿಗಾಗಿ ಒಂದೊಂದು ಸಸಿ ನೆಟ್ಟು, ಗಿಡವನ್ನಾಗಿಸುವ ಸಂಕಲ್ಪ ಮಾಡಬೇಕು, ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯವಂತರಾಗಿ ಬದುಕು ನಡೆಸಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳಿದ್ದು ಅವುಗಳ ನಿವಾರಣಗೆ ಕೊರಡಕೇರಾ ಗ್ರಾಪಂ ಪಿಡಿಒ ಕ್ರಮವಹಿಸಬೇಕೆಂದರು.ಜಿ. ಬೆಂಚಮಟ್ಟಿ ಗ್ರಾಮವನ್ನು ದತ್ತು ಪಡೆದುಕೊಂಡು ಈ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಗ್ರಾಮದೊಳಗೆ ಬರುವ ಬಸ್ ತಂಗಲು ಮತ್ತು ಮರಳಲು ಸೂಕ್ತ ಜಾಗೆ ಒದಗಿಸಿ ಬಸ್ ತಂಗುದಾಣದ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದಲ್ಲಿ ನ್ಯಾಯಾಂಗ ಇಲಾಖೆಯ ದತ್ತು ಗ್ರಾಮ ಜಿ. ಬೆಂಚಮಟ್ಟಿ ಎಂದು ನಾಮಫಲಕ ಅಳವಡಿಸಬೇಕು, ಮಾದರಿ ಗ್ರಾಮವಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ತೋರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ನಿಂಗಪ್ಪ ಗುನ್ನಾಳ ಮಾತನಾಡಿ, ಶಾಲೆಗೆ ನೂತನ ಕೊಠಡಿ ಸೇರಿದಂತೆ ಕೆಲ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಶಾಲೆಗೆ ನೀಡಿದ್ದ 4 ಗುಂಟೆ ಜಾಗೆ ಒತ್ತುವರಿ ತೆರವುಗೊಳಿಸಿದೆ. ಶಿಥಿಲಾವಸ್ಥೆಯಲ್ಲಿರುವ ಹಳೇ ಕಟ್ಟಡ ಕೆಡವಿ ನೂತನ ಕೊಠಡಿ ನಿರ್ಮಿಸಬೇಕು, ಮಕ್ಕಳಿಗೆ ಮೂತ್ರಾಲಯ, ಶೌಚಾಲಯ, ಬಿಸಿಯೂಟದ ಕೊಠಡಿ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ತಾಪಂ ಇಒ ಪಂಪಾಪತಿ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.ಜು. 12ರಂದು ನಡೆಯುವ ಲೋಕ ಅದಾಲತ್ ಕುರಿತು ಕರಪತ್ರ ವಿತರಿಸಲಾಯಿತು. ಗ್ರಾಮದಲ್ಲಿ ಆರೋಗ್ಯ ತಪಾಸಣೆ, ಮಕ್ಕಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ಅಹವಾಲು ಸ್ವೀಕಾರ ಸಹ ನ್ಯಾಯಾಧೀಶರಿಂದ ನಡೆಯಿತು.
ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶ ಮಾಯಪ್ಪ ಎಲ್. ಪೊಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಸುರೇಂದ್ರ ಕಾಂಬಳೆ, ಡಿಪೋ ಮ್ಯಾನೇಜರ್ ಸುಂದರಗೌಡ ಪಾಟೀಲ, ಸಿಡಿಪಿಒ ಯಲ್ಲಮ್ಮ ಹಂಡಿ, ಪಿಡಿಒ ದಸ್ತಗೀರಸಾಬ್ ಬಡಿಗೇರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಶಾಲೆಗೆ ಭೂ ದಾನ ನೀಡಿದ ಲಕ್ಷ್ಮವ್ವ ದುರಗನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.