ವೆನ್ಲಾಕ್ ಅಭಿವೃದ್ಧಿಗೆ ಜಮೀನು ಕಾಯ್ದಿರಿಸಲು ಸಚಿವ ದಿನೇಶ್ ಗುಂಡೂರಾವ್ ಸೂಚನೆ

| Published : Jul 01 2025, 12:48 AM IST

ವೆನ್ಲಾಕ್ ಅಭಿವೃದ್ಧಿಗೆ ಜಮೀನು ಕಾಯ್ದಿರಿಸಲು ಸಚಿವ ದಿನೇಶ್ ಗುಂಡೂರಾವ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ವೆನ್ಲಾಕ್ ಜಿಲ್ಲಾಸ್ಪತ್ರೆಯ ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ನಗರದ ಕೇಂದ್ರಭಾಗದ ಹೊರವಲಯದಲ್ಲಿ ಜಮೀನು ಕಾಯ್ದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ವೆನ್ಲಾಕ್ ಜಿಲ್ಲಾಸ್ಪತ್ರೆಯ ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ನಗರದ ಕೇಂದ್ರಭಾಗದ ಹೊರವಲಯದಲ್ಲಿ ಜಮೀನು ಕಾಯ್ದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಷಯ ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜ, ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ಇರುವ ಜಮೀನಿನಲ್ಲಿ ವಿವಿಧ ಕಟ್ಟಡಗಳು ತುಂಬಿದ್ದು, ಭವಿಷ್ಯದ ವಿಸ್ತರಣೆ ಹಾಗೂ ಹೊಸ ಅಭಿವೃದ್ಧಿ ಯೋಜನೆಗಳಿಗೆ ಸ್ಥಳಾವಕಾಶದ ಕೊರತೆ ಎದುರಾಗಬಹುದು.

ಈ ನಿಟ್ಟಿನಲ್ಲಿ ನಗರ ಸಂಪರ್ಕಿಸುವ ಹೆದ್ದಾರಿಯ ಸಮೀಪ ಜಾಗ ಕಾಯ್ದಿರಿಸುವಂತೆ ಅಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಜಮೀನು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಅರೋಗ್ಯಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ, ಮೂಡುಶೆಡ್ಡೆ ಟಿ.ಬಿ. ಆಸ್ಪತ್ರೆ ಸಮೀಪ 8 ಎಕರೆ ಜಾಗ ಲಭ್ಯವಿದೆ ಎಂದರು.ಹೊಸ ಕಟ್ಟಡ ನಿರ್ಮಾಣ ಶೀಘ್ರ: ವೆನ್ಲಾಕ್ ಆಸ್ಪತ್ರೆಯ ಹಾಲಿ ಹೊರರೋಗಿ ವಿಭಾಗವನ್ನು ತೆರವುಗೊಳಿಸಿ, 4 ಮಹಡಿಗಳ ಹೊಸ ಕಟ್ಟಡ ನಿರ್ಮಾಣ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಸಾದ್ ತಿಳಿಸಿದರು.ಈಜುಕೊಳ ಗೊಂದಲ: ನಗರದ ಎಮ್ಮೆಕೆರೆ ಈಜುಕೊಳದ ಸೌಲಭ್ಯಗಳ ಬಳಕೆ ಬಗ್ಗೆ ಈಜು ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಕುರಿತು ಸಭೆ ನಡೆಸಿ ಚರ್ಚಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಈಜುಕೊಳದ ಯಾವುದೇ ನಿರ್ಮಾಣಗಳನ್ನು ಅನುಮತಿ ಇಲ್ಲದೆ ಬದಲಾಯಿಸಲು ಅವಕಾಶ ನೀಡಬಾರದು ಎಂದು ತಿಳಿಸಿದರು.

ನಗರ ಯೋಜನಾ ಪ್ರಾಧಿಕಾರಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ನಕ್ಷೆ ಮಂಜೂರಾತಿ, 9/11, ಮನೆ ನಿರ್ಮಾಣ ಅನುಮತಿ ಮತ್ತಿತರ ಕಾರ್ಯಗಳಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಯಾಗಿ, ಅಗತ್ಯ ಸಿಬ್ಬಂದಿ ಒದಗಿಸಲು ಸಚಿವರು ಸೂಚಿಸಿದರು.

ಪಂಪವೆಲ್ ಸಮೀಪ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕಲ್ ಬಸ್ ಡಿಪೋ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್‌.ವಿ. ದರ್ಶನ್ ತಿಳಿಸಿದರು.ಹಾಸ್ಟೆಲ್‌ ಹೆಚ್ಚಳಕ್ಕೆ ಬೇಡಿಕೆ: ಶೈಕ್ಷಣಿಕ ಹಬ್‌ ಆಗಿ ಗುರುತಿಸಿಕೊಂಡಿರುವ ದ.ಕ. ಜಿಲ್ಲೆಗೆ ವಿವಿಧೆಡೆಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಹೆಚ್ಚುವರಿ ವಸತಿ ನಿಲಯ (ಹಾಸ್ಟೆಲ್‌)ಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಶಾಸಕರಾದ ಐವನ್‌ ಡಿಸೋಜ, ಉಮಾನಾಥ ಕೋಟ್ಯಾನ್‌, ಧನಂಜಯ ಸರ್ಜಿ, ಬೋಜೇಗೌಡ ಆಗ್ರಹಿಸಿದರು.ಕೃಷಿ ಸಾಲ ಕ್ಷೀಣ:

ಕೃಷಿಕರಿಗೆ 5 ಲಕ್ಷ ರು.ವರೆಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವುದಾಗಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರೂ ರೈತರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ನಬಾರ್ಡ್‌ನವರು ಕೊಡಬೇಕಾದ ಹಣದಲ್ಲಿ 2,600 ಕೋಟಿ ರು. ಕಡಿತ ಮಾಡಿದ್ದರಿಂದ ಸಹಕಾರಿ ಬ್ಯಾಂಕ್‌ಗಳಿಗೆ ಹಣದ ಕೊರತೆಯಾಗಿದೆ. ಈ ಕುರಿತು ನಬಾರ್ಡ್‌ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.ಸೇತುವೆಗಳ ದುರಸ್ತಿ: ಜಿಲ್ಲೆಯಲ್ಲಿ ತುರ್ತಾಗಿ ದುರಸ್ತಿ ಆಗಬೇಕಾಗಿರುವ ಸೇತುವೆಗಳ ಪಟ್ಟಿ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ನೀಲಗಿರಿ, ಅಕೇಶಿಯ ಮರಗಳ ತೆರವಿಗೆ ಕ್ರಮ

2017ರಿಂದ ನೀಲಗಿರಿ ಹಾಗೂ ಅಕೇಶಿಯಾ ಮರಗಳನ್ನು ತೆರವುಗೊಳಿಸಿ ಅವುಗಳ ಜಾಗದಲ್ಲಿ ಹಣ್ಣು ಹಂಪಲಿನ ಗಿಡಗಳನ್ನು ಬೆಳೆಸುವ ಕ್ರಮ ವಹಿಸಲಾಗುತ್ತಿದೆ. ಮುಂದಿನ 10 ವರ್ಷಗಳ ಅವಧಿಯಲ್ಲಿ ಅಕೇಶಿಯಾ ನೀಲಗಿರಿ ಸಂಪೂರ್ಣ ತೆರವಿಗೆ ಯೋಜನೆ ರೂಪಿಸಲಾಗಿದೆ. 2023ರವರೆಗೆ 730 ಹೆಕ್ಟೇರ್‌ ಪ್ರದೇಶದಲ್ಲಿ ಈ ಮರಗಳನ್ನು ತೆರವುಗೊಳಿಸಲಾಗಿದ್ದು, ಕಳೆದ ವರ್ಷ 353 ಹೆಕ್ಟೇರ್‌ ಪ್ರದೇಶದಲ್ಲಿ ತೆರವು ಕಾರ್ಯ ನಡೆದಿದೆ. ಈ ವರ್ಷ 500 ಹೆಕ್ಟೇರ್‌ ಪ್ರದೇಶದಲ್ಲಿ ತೆರವಿಗೆ ಯೋಜನೆ ರೂಪಿಸಲಾಗಿದೆ ಎಂದು ಉಪ ಅರಣ್ಯ ಸಂರ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ತಿಳಿಸಿದರು.