ಅರಳಿಕೊಪ್ಪ ಗ್ರಾಮಕ್ಕೆ ಕಾಡಾನೆ ಕಾಟ: ಅಡಕೆ, ಬಾಳೆ ದ್ವಂಸ

| Published : Jul 01 2025, 12:47 AM IST / Updated: Jul 01 2025, 12:48 AM IST

ಸಾರಾಂಶ

ನರಸಿಂಹರಾಜಪುರ ಗುಬ್ಬಿಗಾ ಗ್ರಾಮ ಪಂಚಾಯಿತಿ ಅರಳಿಕೊಪ್ಪ ಗ್ರಾಮದಲ್ಲಿ ಕಳೆದ 3-4 ದಿನದಿಂದ 2 ಕಾಡಾನೆಗಳು ಕಾಣಿಸಿಕೊಂಡಿದ್ದು ರೈತರ ಅಡಕೆ,ಬಾಳೆ ನಾಶ ಮಾಡುತ್ತಿವೆ.

3-4 ದಿನದಿಂದ 2 ಕಾಡಾನೆಗಳ ರಂಪಾಟ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗುಬ್ಬಿಗಾ ಗ್ರಾಮ ಪಂಚಾಯಿತಿ ಅರಳಿಕೊಪ್ಪ ಗ್ರಾಮದಲ್ಲಿ ಕಳೆದ 3-4 ದಿನದಿಂದ 2 ಕಾಡಾನೆಗಳು ಕಾಣಿಸಿಕೊಂಡಿದ್ದು ರೈತರ ಅಡಕೆ,ಬಾಳೆ ನಾಶ ಮಾಡುತ್ತಿವೆ.

4 ದಿನದ ಹಿಂದೆ ಅರಳಿಕೊಪ್ಪದ ವಿಜು ಎಂಬುವರ ತೋಟಕ್ಕೆ ನುಗ್ಗಿ ಅಡಕೆ ಹಾಗೂ ಬಾಳೆ ಯನ್ನು ಹಾಳು ಮಾಡಿತ್ತು. ಶನಿವಾರ ಹಾಗೂ ಭಾನುವಾರ ರಾತ್ರಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು ರಾತ್ರಿ ಹೊತ್ತಿನಲ್ಲಿ ಮಾವಿನ ಮನೆ ಮಂಜುನಾಥ್ ಹಾಗೂ ಅರಳಿಕೊಪ್ಪ ಗ್ರಾಮದ ಎಸ್.ಎನ್.ಮಂಜುನಾಥ್, ಮಧು ಬಂಡಾರಿ ಎಂಬುವರ ತೋಟಕ್ಕೆ ನುಗ್ಗಿ ಅವರ ತೋಟಕ್ಕೆ ನುಗ್ಗಿ ನೂರಾರು ಅಡಕೆ,ಬಾಳೆ ಮರವನ್ನು ಹಾಳು ಮಾಡಿವೆ. ರಾತ್ರಿ ಹೊತ್ತಿನಲ್ಲಿ ತೋಟಕ್ಕೆ ನುಗ್ಗುವ ಎರಡು ಕಾಡಾನೆಗಳು ಹಗಲು ಹೊತ್ತಿನಲ್ಲಿ ಕಾಡಿಗೆ ಸೇರಿಕೊಳ್ಳುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಈ ವರೆಗೆ ಅರಳಿಕೊಪ್ಪ ಗ್ರಾಮಕ್ಕೆ ಬಾರದ ಕಾಡಾನೆಗಳು ಪ್ರಥಮ ಬಾರಿಗೆ ದಾಳಿ ನಡೆಸಿದೆ. ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಉಪ ವಲಯ ಅರಣ್ಯಾಧಿಕಾರಿ ಸುರೇಶ ರೆಡ್ಡಿ ಮತ್ತಿತರ ಅರಣ್ಯ ಸಿಬ್ಬಂದಿ, ಎಲಿಫಂಟ್ ಟಾಸ್ಕ್ ಪೋಸ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಸ್ಥಳೀಯ ಮುಖಂಡ ಎಚ್.ಡಿ.ಲೋಕೇಶ್ ತಿಳಿಸಿದರು.

ಕಾಡಾನೆ ಓಡಿಸಲು ಆಗ್ರಹ: ಅರಳಿಕೊಪ್ಪ ಗ್ರಾಮದಲ್ಲಿ ಹಗಲು ಹೊತ್ತಿನಲ್ಲೂ ರಸ್ತೆಯಲ್ಲಿ ಓಡಾಡಲು ಭಯ ಪಡುವಂತಾಗಿದೆ. ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಿ ತೋಟದ ಕೆಲಸ ನಿರ್ಭೀತಿಯಿಂದ ಮಾಡಲು ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.