ಬ್ಯಾಡಗಿ: ಕೃಷಿಭೂಮಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಕುಸಿತ, ಪೋಷಕಾಂಶಗಳ ಅಸಮತೋಲನ ಹಾಗೂ ನಿರಂತರ ಹವಾಮಾನ ವೈಪರೀತ್ಯದಿಂದ ಮಣ್ಣಿನ ಉತ್ಪಾದಕತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದು, ಮಣ್ಣಿನ ಆರೋಗ್ಯ ನಿರ್ವಹಣೆಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಹೇಳಿದರು.
ತಾಲೂಕಿನ ಕೆಂಗೊಂಡ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮರುಭೂಮೀಕರಣ ಹಾಗೂ ಖೇತ್ ಬಚಾವೋ ಅಭಿಯಾನದಲ್ಲಿ ಮಾತನಾಡಿದರು.ಭೂ ಸಂಪನ್ಮೂಲಗಳ ಅವನತಿ, ಮಣ್ಣಿನ ಸವಕಳಿ, ಅಂತರ್ಜಲ ಮಟ್ಟ ಕುಸಿತ ಹಾಗೂ ಅಸಮರ್ಪಕ ಪೋಷಕಾಂಶ ನಿರ್ವಹಣೆ ಕೃಷಿಭೂಮಿ ಕ್ರಮೇಣ ಉತ್ಪಾದಕತೆಯಿಂದ ವಂಚಿತಗೊಳಿಸುತ್ತಿದೆ. ಮರು ಭೂಮಿಕರಣ ಕೇವಲ ಮರಳು ಪ್ರದೇಶಗಳ ವಿಸ್ತರಣೆಯಲ್ಲ. ಭೂಮಿ ಉತ್ಪಾದನಾ ಸಾಮರ್ಥ್ಯ ಕುಸಿಯುವ ಪ್ರಕ್ರಿಯೆಯಾಗಿದೆ, ಇದನ್ನು ತಡೆಗಟ್ಟಲು ಮಣ್ಣಿನ ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆ, ಬೆಳೆ ಪರಿವರ್ತನೆ, ಹಸಿರು ಗೊಬ್ಬರ ಬಳಕೆ, ಸಾವಯವ ಪದಾರ್ಥಗಳ ಸೇರ್ಪಡೆ ಹಾಗೂ ಮಳೆನೀರು ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಹೇಳಿದರು.
ಉಪನ್ಯಾಸ ನೀಡಿದ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿಯ ವಿಷಯ ತಜ್ಞೆ ಡಾ. ಸಿದ್ದಗಂಗಮ್ಮ, ಖೇತ್ ಬಚಾವೋ ಅಭಿಯಾನದಡಿ ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣೆಗೆ ಒತ್ತು ನೀಡಲಾಗುತ್ತಿದೆ. ತಾಲೂಕಿನ ಬಹುತೇಕ ಕೃಷಿ ಭೂಮಿಗಳಲ್ಲಿ ಸಾರಜನಕ, ರಂಜಕ, ಪೋಟ್ಯಾಶ್ ಹಾಗೂ ಸೂಕ್ಷ್ಮ ಪೋಷಕಾಂಶಗಳ ಅಸಮತೋಲನ ಕಂಡು ಬರುತ್ತಿದ್ದು, ಮಣ್ಣಿನ ಪರೀಕ್ಷೆ ವರದಿ ಆಧರಿಸಿ ಗೊಬ್ಬರ ಬಳಕೆ ಮಾಡಬೇಕು. ಮಣ್ಣಿನ ಆರೋಗ್ಯ ಚೀಟಿ ರೈತರಿಗೆ ವೈಜ್ಞಾನಿಕ ಪೋಷಕಾಂಶ ನಿರ್ವಹಣೆಗೆ ಮಾರ್ಗದರ್ಶಿಯಾಗಿದ್ದು, ಇದರಿಂದ ಗೊಬ್ಬರ ಬಳಕೆಯ ದಕ್ಷತೆ ಹೆಚ್ಚುವುದರ ಜೊತೆಗೆ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ ಎಂದು ಹೇಳಿದರು.ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ರೈತರು ಅಂತರ ಬೇಸಾಯ ಮಣ್ಣಿನ ಹೊದಿಕೆ ಸೇರಿದಂತೆ ತೇವಾಂಶ ಸಂರಕ್ಷಣಾ ತಂತ್ರಜ್ಞಾನಗಳಿಗೆ ಆದ್ಯತೆ ನೀಡಬೇಕು. ಅಗತ್ಯವಿದ್ದಲ್ಲಿ ಸೂರ್ಯಕಾಂತಿ, ಜೋಳ, ಸಜ್ಜೆ, ಹುರಳಿ, ಹೆಸರು, ಉದ್ದು ಸೇರಿದಂತೆ ಕಡಿಮೆ ಅವಧಿ ಮತ್ತು ಕಡಿಮೆ ನೀರು ಅಗತ್ಯವಿರುವ ಪರ್ಯಾಯ ಬೆಳೆಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಅಂತರ ಬೇಸಾಯ, ಮಲ್ಚಿಂಗ್, ಸಮತಟ್ಟು ಬೇಸಾಯ ಹಾಗೂ ಮಳೆ ನೀರು ಕೊಯ್ಲು ಕ್ರಮಗಳಿಂದ ಬರಗಾಲದ ಪರಿಣಾಮವನ್ನು ತಗ್ಗಿಸಬಹುದು ಎಂದು ಸಲಹೆ ನೀಡಿದರು.
ಕೃಷಿಕರಾದ ಚಂದ್ರಪ್ಪ ಗುಡಗೂರು, ಶಂಭಣ್ಣ ಕವಲಗುಡ್ಡದ, ಮುಖ್ಯಶಿಕ್ಷಕ ಬಸವರಾಜು ಚಿಕ್ಕಣಜಿ, ಸುರೇಶ ಕಮ್ಮಾರ, ಕೃಷಿಕ ಸಮಾಜದ ಸದಸ್ಯ ನಾಗರಾಜ ಕುರುವತ್ತಿ, ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಸೇರಿದಂತೆ ರೈತರು, ವಿದ್ಯಾರ್ಥಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.