ಶಿವಾನಂದ ಗೊಂಬಿ

ಹುಬ್ಬಳ್ಳಿ: ಬಿಹಾರ, ಪಶ್ಚಿಮ ಬಂಗಾಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಸ್‌ಐಆರ್‌ (ವಿಶೇಷ ಮತದಾರರ ಪರಿಷ್ಕರಣೆ) ಇದೀಗ ಕರ್ನಾಟಕದಲ್ಲಿ ಶುರುವಾಗಲಿದ್ದು, ಎಲ್ಲೆಡೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ವಿರೋಧಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಸುತ್ತಿದೆ ಎಂದು ಕಾಂಗ್ರೆಸ್‌ ಜಾಗೃತಿ ಸಮಾವೇಶ ನಡೆಸುತ್ತಿರುವುದೇಕೆ? ಕಾಂಗ್ರೆಸ್ ಹೇಳುವಂತೆ ಅರ್ಹರ ಹೆಸರನ್ನು ತೆಗೆದು ಹಾಕಲು ಸಾಧ್ಯವೇ?.

ಇಂಥ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ವಿವಿಧೆಡೆ ಎಸ್ಐಆರ್‌ ಅಡಿ ಲಕ್ಷಾಂತರ ಜನರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್‌ ದೂರಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಜೂ.30ರಿಂದ ಶುರುವಾಗುವ ಎಸ್‌ಐಆರ್‌ ಕುರಿತು ಕಾಂಗ್ರೆಸ್‌ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಕಾರ್ಯಕರ್ತರಿಗೆ ನಮ್ಮ ಪರವಾಗಿರುವ ಮತದಾರರ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಟಾಸ್ಕ್‌ ನೀಡಿದೆ.

ಏನಿದು ಎಸ್‌ಐಆರ್‌?

ಎಸ್‌ಐಆರ್‌ ಎಂದರೆ ಸ್ಪೆಷಲ್‌ ಇನ್ಟೆನ್ಸೀವ್‌ ರಿವಿಸನ್‌ (ವಿಶೇಷ ಮತದಾರರ ಪರಿಷ್ಕರಣೆ) ಎಂದರ್ಥ. 2020ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆದ ಬಳಿಕ ಇದೀಗ ಮತ್ತೆ ಶುರುವಾಗಿದೆ. ಯಾರು ಮೃತಪಟ್ಟಿದ್ದಾರೆ, ಎರಡು ಕಡೆ ಹೆಸರಿದ್ದವರ ಹಾಗೂ ನಕಲಿ ಮತದಾರರನ್ನು ತೆಗೆದು ಹಾಕುವುದೇ ಎಸ್‌ಐಆರ್‌. ಜಿಲ್ಲೆಯಲ್ಲಿ 2020ರಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಆಗ ಇಲ್ಲದ ಭಯ ಈಗೇಕೆ ಎಂದು ಬಿಜೆಪಿಗರು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ.


16 ಲಕ್ಷ ಮತದಾರರು

ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 16,21,961 ಮತದಾರರಿದ್ದು 15,92,152 (ಶೇ.98.65) ಮತದಾರರ ಮ್ಯಾಪಿಂಗ್‌ ಮುಗಿದಿದೆ.

ಕೆಲವೊಬ್ಬರಿಂದ ಅರ್ಜಿ ತುಂಬಿಸಿಕೊಂಡರೆ, ಉಳಿದವರದ್ದು ಟೇಬಲ್‌ ಮ್ಯಾಪಿಂಗ್‌ ಮಾಡಲಾಗಿದೆ. ಇದೀಗ ಎಸ್‌ಐಆರ್‌ ಮೂಲಕ ಬಿಎಲ್‌ಒ ಮನೆ-ಮನೆಗೆ ತೆರಳಿ ತಮಗೆ ಬಂದ ಮ್ಯಾಪಿಂಗ್‌ ಸರಿ ಇದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಲಿದ್ದಾರೆ. ಅವರ ಹೆಸರು, ವಿಳಾಸ ಹಾಗೂ ಸ್ಪೆಲ್ಲಿಂಗ್‌ (ಅಕ್ಷರ) ಸರಿ ಇದೆಯೋ-ಇಲ್ಲವೋ ಎನ್ನುವುದು ಪರಿಶೀಲನೆ ನಡೆಸಿ ಆ್ಯಪ್‌ ಮೂಲಕ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ.

ಈಗೇನು ಸಮಸ್ಯೆ?

ಮ್ಯಾಪಿಂಗ್‌ನಲ್ಲಿ ಹೆಸರು ಸ್ವಲ್ಪ ವ್ಯತ್ಯಾಸವಾದರೂ ಹೊಂದಾಣಿಕೆ ಆಗದೆ ಅವರ ಹೆಸರು ಡಿಲಿಟ್‌ ಆಗುತ್ತದೆ. ಜತೆಗೆ ಕೆಲವರು ಅರ್ಜಿಯಲ್ಲಿ ತಮ್ಮ ಹೆಸರನ್ನು ಸರಿಯಾಗಿ ಬರೆದಿರುವುದಿಲ್ಲ. ಅರ್ಜಿಯಲ್ಲಿರುವ ಹೆಸರನ್ನು ಎಐ ಆಧಾರಿತ ಆ್ಯಪ್‌ ಮೂಲಕ ನಮೂದಿಸಿದಾಗ ಇಂಗ್ಲಿಷ್‌ನಲ್ಲಿ ನಮೂದಿಸಿದ ಹೆಸರು ಕನ್ನಡದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಡಿಲೀಟ್‌ ಆಗುವ ಸಾಧ್ಯತೆಯುಂಟು. ಸ್ಪೆಲ್ಲಿಂಗ್‌, ಹುಟ್ಟಿದ ದಿನ ಹೀಗೆ ಏನಾದರೂ ಮಿಸ್‌ ಮ್ಯಾಚ್‌ ಆದರೆ ಡಿಲಿಟ್‌ ಆಗುವ ಆತಂಕ ಇದೆ. ಅದರಲ್ಲೂ ಅಲ್ಪಸಂಖ್ಯಾತರು, ದಲಿತರು, ಅನಕ್ಷರಸ್ಥರ ಹೆಸರು ಡಿಲಿಟ್‌ ಆಗುವ ಸಂಶಯವುಂಟು. ಚುನಾವಣಾ ಆಯೋಗದ ಮೂಲಕ ತಮ್ಮ ವಿರೋಧಿ ಮತದಾರರ ಹೆಸರನ್ನು ಡಿಲೀಟ್‌ ಮಾಡಿಸಲು ಬಿಜೆಪಿಗರು ಹುನ್ನಾರ ನಡೆಸಿದ್ದಾರೆಂದು ಕಾಂಗ್ರೆಸ್‌ ಆರೋಪಿಸುತ್ತಿದೆ.

ಡಿಲೀಟ್‌ ಆಗಲ್ಲ

ಆದರೆ, ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ. ಹೆಸರು, ವಿಳಾಸ, ಜನ್ಮದಿನಾಂಕಕ್ಕೆ ಸರಿಯಾದ ದಾಖಲೆ ನೀಡಬೇಕು. ಒಂದು ವೇಳೆ ಎಸ್‌ಐಆರ್‌ ವೇಳೆ ಸಮಸ್ಯೆಯಾದರೆ ಕರಡು ಪ್ರತಿ ಹೊರಬಿದ್ದ ಮೇಲೂ ಆಕ್ಷೇಪಣೆ ಸಲ್ಲಿಸಬಹುದು. ಹೀಗಾಗಿ ಅರ್ಹ ಮತದಾರರ ಯಾರ ಹೆಸರು ಡಿಲೀಟ್‌ ಆಗಲ್ಲ. ಈ ಬಗ್ಗೆ ಸಂಶಯ ಬೇಡ ಎಂಬ ಅಭಯ ವ್ಯಕ್ತಪಡಿಸುತ್ತಿದೆ.

ಬಿಎಲ್‌ಒಗಳೆಷ್ಟು?

7 ಕ್ಷೇತ್ರಗಳಲ್ಲಿ ಒಟ್ಟು 1665 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಗೊಬ್ಬರಂತೆ ಬಿಎಲ್‌ಒಗಳನ್ನು ಜಿಲ್ಲಾಡಳಿತ ನೇಮಿಸಿದೆ. ಇದಕ್ಕೆ ಸರಿ ಸಮನಾಗಿ ಎಬಿಎಲ್‌ಒ ಗಳಿದ್ದಾರೆ. ಜತೆಗೆ ರಾಜಕೀಯ ಪಕ್ಷಗಳು ಕೂಡ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬಿಎಲ್‌ಎ (ಬೂತ್‌ಲೇವಲ್‌ ಅಸಿಸ್ಟಂಟ್‌) ನಿಯೋಜಿಸಿಕೊಂಡಿವೆ.

ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಸಾಕಷ್ಟು ಜನ ಮತದಾರರನ್ನು ಡಿಲೀಟ್‌ ಮಾಡಿರುವ ಉದಾಹರಣೆಗಳಿವೆ. ಹೆಸರು ನಮೂದಿಸುವಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸವಾದರೂ ಡಿಲೀಟ್‌ ಮಾಡುತ್ತಾರೆ ಎಂಬ ಭಯ ಸಾರ್ವಜನಿಕರಲ್ಲಿದೆ. ಎಸ್‌ಐಆರ್‌ ಮಾಡಲಿ. ಆದರೆ, ನಿಷ್ಪಕ್ಷಪಾತವಾಗಿ ಮಾಡಬೇಕು. ಅರ್ಹರ ಹೆಸರು ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದು ಧಾರವಾಡ ಜಿಲ್ಲೆಯ ಕಾಂಗ್ರೆಸ್‌ನ ಎಸ್‌ಐಆರ್‌ ಉಸ್ತುವಾರಿ ಶಾಕೀರ ಸನದಿ ಹೇಳಿದ್ದಾರೆ.