ಲಕ್ಷ್ಮೇಶ್ವರ: ಕನ್ನಡ ನಾಡು ಕಲೆ, ಸಾಹಿತ್ಯ, ಶಿಕ್ಷಣ, ಸಮಾಜಸೇವೆ, ವಿಜ್ಞಾನ, ರಾಜಕೀಯ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಮಹಿಳೆಯರನ್ನು ಕಂಡಿದೆ ಎಂದು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಜಗದ್ಗುರು ವೀರಗಂಗಾಧರ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸರಸ್ವತಿ ಹುಲ್ಲಣ್ಣವರ ತಿಳಿಸಿದರು.

ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಜರುಗಿದ ಕನ್ನಡ ನಾಡಿನ ಅನನ್ಯ ಸಾಧಕಿಯರು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮ್ಮ ಪ್ರತಿಭೆ, ಪರಿಶ್ರಮ, ತ್ಯಾಗ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಇವರು ಕನ್ನಡದ ಕೀರ್ತಿಯನ್ನು ದೇಶ- ವಿದೇಶಗಳಲ್ಲಿ ಪಸರಿಸಿದ್ದಾರೆ. ಇಂತಹ ಅನನ್ಯ ಸಾಧಕಿಯರು ಇಂದಿನ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದರು.

ಕವಿತಾ ಮಿಶ್ರಾ ಅವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ನಿವಾಸಿಯಾಗಿದ್ದು, ಸಾಫ್ಟ್‌ವೇರ್ ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದು ಖ್ಯಾತ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಕಲ್ಲುಬಂಡೆ ಮತ್ತು ಬಂಜರು ಭೂಮಿಯನ್ನು ಹನಿ ನೀರಾವರಿ ಹಾಗೂ ಸಾವಯವ ಕೃಷಿಯ ಮೂಲಕ ಯಶಸ್ವಿ ತೋಟವಾಗಿ ಪರಿವರ್ತಿಸಿದ್ದಾರೆ.

ಆಡಳಿತ ಸೇವೆಯಲ್ಲಿ ರೂಪಾ ಡಿ., ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಸುಧಾಮೂರ್ತಿ, ಪರಿಸರ ಕಾಳಜಿಯಲ್ಲಿ ಸಾಲುಮರದ ತಿಮ್ಮಕ್ಕ ಮತ್ತು ತುಳಸಿಗೌಡ ಸೇರಿದಂತೆ ಸಾವಿರಾರು ಕನ್ನಡ ನಾಡಿನ ಮಹಿಳೆಯರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯರಾದ ಶಕುಂತಲಾ ಅಳಗವಾಡಿ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಮತ್ತು ಆಡಳಿತ ಕ್ಷೇತ್ರದಲ್ಲಿಯೂ ನಾಡಿನ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ. ಜನಸೇವೆ, ನಾಯಕತ್ವ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅವರು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಸಂಗೀತ, ನೃತ್ಯ, ಕ್ರೀಡೆ ರಂಗಭೂಮಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ ಎಂದರು.

ಈ ವೇಳೆ ಕಾಂಚನಮಾಲಾ ಹಸರೆಡ್ಡಿ, ಅರುಂಧತಿ ಬಿಂಕದಕಟ್ಟಿ, ನಿವೃತ್ತ ಶಿಕ್ಷಕಿ ಸುವರ್ಣ ಹಿರೇಮಠ ಅನೇಕ ಕನ್ನಡತಿಯರ ಸಾಧನೆಯನ್ನು ಸ್ಮರಿಸಿದರು. ವೇದಿಕೆಯ ಅಧ್ಯಕ್ಷೆ ಹಿರಿಯ ಮಹಿಳಾ ಸಾಹಿತಿ ಲಲಿತಾ ಕೆರಿಮನಿ, ಕಾರ್ಯದರ್ಶಿ ನಿರ್ಮಲಾ ಅರಳಿ, ದೇವಕ್ಕ ಪಾಟೀಲ, ಕೋಶಾಧ್ಯಕ್ಷ ರತ್ನಾಕರ್ಕಿ, ನೀಲಕ್ಕ ಬೂದಿಹಾಳ, ಸಾವಿತ್ರಿಬಾಯಿ ಗುಡಗೇರಿ, ಮಹಾನಂದ ಕೊಣ್ಣೂರ ಸೇರಿದಂತೆ ಅನೇಕರು ಇದ್ದರು. ಗಾಯಿತ್ರಿ ಅಂಗಡಿ, ಪಾರ್ವತಿ ಕಳ್ಳಿಮಠ, ನಂದಿನಿ ಮಾಳವಾಡ, ಚಿತ್ರಾ ಯಾಳಗಿ, ನಾಗರತ್ನ ಬುರುಡಿ ಕಾರ್ಯಕ್ರಮ ನಿರ್ವಹಿಸಿದರು.