ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು, ಜಿಲ್ಲೆಯಲ್ಲೂ ಉದ್ಭವಿಸಿರುವ ಮಳೆಯ ಕೊರತೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವು ಸಂಪೂರ್ಣ ಸಜ್ಜಾಗಿದೆ.ಜಿಲ್ಲೆಯ ಜಲಾಶಯಗಳು ಮತ್ತು ಕೆರೆಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು,ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ.
ಕುಡಿಯುವ ನೀರಿಗೆ ಮೊದಲ ಆದ್ಯತೆ:ಕುಡಿಯುವ ನೀರಿನ ಅಭಾವವಿರುವ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಕ್ಷಣವೇ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್‌ಗಳ ಮೂಲಕ ಅಥವಾ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಮಹಾನಗರ ಪಾಲಿಕೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಇಲ್ಲ. ಆದರೆ ಆನವಟ್ಟಿಗೆ ಮಾತ್ರ ಬೋರ್ ವೆಲ್ ನೀರು ವ್ಯವಸ್ಥೆ ಮಾಡಲಾಗಿದ್ದು ಇನ್ನುಳಿದಂತೆ ನದಿಮೂಲದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸೊರಬ, ಶಿರಾಳಕೊಪ್ಪ, ಹೊಸನಗರಕ್ಕೆ ಇನ್ನೆರಡು ತಿಂಗಳು ಕುಡಿಯುವ ನೀರಿನ ಕೊರತೆ ಇಲ್ಲ ಹಾಗೂ ಉಳಿದೆಡೆ 6 ರಿಂದ 8 ತಿಂಗಳು ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಒಟ್ಟು 44 ಗ್ರಾಮ ಪಂಚಾಯಿತಿಗಳಲ್ಲಿ ಜನವರಿಯಿಂದ ಜೂನ್ ತಿಂಗಳವರೆಗೆ ಒಟ್ಟು 97 ಬೋರ್‌ವೆಲ್ ಕೊರೆಸಲಾಗಿದೆ. ಜೂನ್ ತಿಂಗಳಲ್ಲಿ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯ 37 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಶಿವಮೊಗ್ಗ, ಭದ್ರಾವತಿ, ಸೊರಬ, ಹೊಸನಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಪರ್ಯಾಯ ಬೆಳೆಗೆ ಸೂಚನೆ:
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ರೈತರು ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಬೆಳೆ ಹಾಗೂ ಕಡಿಮೆ ಅವಧಿಯ ತಳಿಗಳ ಕಡೆಗೆ ಗಮನಹರಿಸಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಜೂನ್ ತಿಂಗಳ ಆರಂಭದಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದ್ದರೂ, ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿ ಬಿದ್ದ ಮಳೆಯು ಬಿತ್ತನೆಗೆ ಉತ್ತಮ ಅವಕಾಶ ಕಲ್ಪಿಸಿತ್ತು. ಆದರೆ, ಕಳೆದ ಒಂದು ವಾರದಿಂದ ಮಳೆ ಸಂಪೂರ್ಣ ಕ್ಷೀಣಿಸಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಭತ್ತದ ಸಸಿಮಡಿ ತಯಾರಿಕೆ ಹಿನ್ನಡೆಯಾಗಿದ್ದು, ಈಗಾಗಲೇ ಶಿಕಾರಿಪುರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಬಿತ್ತನೆಯಾಗಿರುವ ಖುಷ್ಕಿ ಬೆಳೆಗಳಿಗೆ ತೇವಾಂಶದ ಕೊರತೆ ಎದುರಾಗಿದೆ.ಜಿಲ್ಲೆಯಲ್ಲಿ ಶೇ. 44ರಷ್ಟು ಮಳೆ ಕೊರತೆ:
ಜಿಲ್ಲೆಯಲ್ಲಿ ಶೇ.44 ರಷ್ಟು ಮಳೆ ಕೊರತೆಯಾಗಿದೆ. ಜೂನ್ 1 ರಿಂದ ಜುಲೈ 17 ರವರೆಗಿನ ಅವಽಯಲ್ಲಿ ಜಿಲ್ಲೆಯ ವಾಡಿಕೆ ಮಳೆ 894.7 ಮಿ.ಮೀ. ಆಗಬೇಕಿತ್ತು. ಆದರೆ, ಕೇವಲ 501.5 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಒಟ್ಟಾರೆ ಶೇ.44ರಷ್ಟು ಮಳೆ ಕೊರತೆ ದಾಖಲಾಗಿದೆ. ಭದ್ರಾವತಿ ತಾಲೂಕಿನಲ್ಲಿ ಶೇ. 54, ಸೊರಬ ಶೇ. 47, ಹೊಸನಗರ ಶೇ.45, ಶಿಕಾರಿಪುರ: ಶೇ. 38, ತೀರ್ಥಹಳ್ಳಿ ಶೇ. 36, ಶಿವಮೊಗ್ಗ ಶೇ. 26, ಸಾಗರ ಶೇ. 18 ಮಳೆ ಕೊರತೆಯಾಗಿದೆ.ಬಿತ್ತನೆಗೆ ಹಿನ್ನಡೆ:
ಈ ಬಾರಿ ಮಳೆ ಕಾರಣ ಜಲಾಶಯಗಳು ಭರ್ತಿಯಾಗದ ಹಿನ್ನೆಲೆ ಭತ್ತದ ಬಿತ್ತನೆಗೆ ಹಿನ್ನಡೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1,13,458 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಜುಲೈ 17 ರ ವರೆಗೆ ಕೇವಲ 31,868 ಹೆಕ್ಟೇರ್ ಶೇ. 28.09 ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಭತ್ತ 66,200 ಹೆಕ್ಟೇರ್ ಗುರಿಗೆ ಕೇವಲ 8743 ಹೆಕ್ಟೇರ್ ಅಂದರೆ ಶೇ. 13.2 ರಷ್ಟು ಬಿತ್ತನೆಯಾಗಿದೆ. ಮೆಕ್ಕೆಜೋಳ 45,807 ಹೆಕ್ಟೇರ್ ಗುರಿಗೆ 22,405 ಹೆಕ್ಟೇರ್ ಶೇ. 48.91 ಬಿತ್ತನೆಯಾಗಿದೆ. ರಾಗಿ 400 ಹೆಕ್ಟೇರ್ ಗುರಿಗೆ 182 ಹೆಕ್ಟೇರ್ ಶೇ. 45.50 ಬಿತ್ತನೆಯಾಗಿದ್ದು ಇತರ ಬೆಳೆಗಳು 1,051 ಹೆಕ್ಟೇರ್ ಗುರಿಗೆ 538 ಹೆಕ್ಟೇರ್ ಶೇ. 51.18 ಬಿತ್ತನೆಯಾಗಿದೆ. ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳಲ್ಲಿ 2,796 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ ಜಿಲ್ಲೆಯಾದ್ಯಂತ ಒಟ್ಟು 34,562 ಮೆಟ್ರಿಕ್ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರ ಲಭ್ಯವಿದೆ.ಮೇವು ಲಭ್ಯತೆ:
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಮುಂದಿನ ೫೦ ವಾರಗಳವರೆಗೆ (ಸುಮಾರು ಒಂದು ವರ್ಷ) ಯಾವುದೇ ಮೇವಿನ ಕೊರತೆ ಇಲ್ಲ. ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 10.6 ಲಕ್ಷ ಟನ್ ಮೇವು ಲಭ್ಯವಿದೆ. ಈ ಮೇವು ಜಿಲ್ಲೆಯ ಎಲ್ಲಾ ತಾಲೂಕುಗಳ ಜಾನುವಾರುಗಳಿಗೆ ಮುಂದಿನ 50 ವಾರಗಳವರೆಗೆ ಸಾಕಾಗಲಿದೆ.ಭದ್ರಾವತಿ ತಾಲೂಕಿನಲ್ಲಿ 59 ವಾರಗಳಿಗೆ ಸಾಕಾಗುತ್ತದೆ. ಹೊಸನಗರ 47 ವಾರಗಳಿಗೆ, ಸಾಗರ 55 ವಾರಗಳಿಗೆ, ಶಿಕಾರಿಪುರ 47 ವಾರಗಳಿಗೆ, ಶಿವಮೊಗ್ಗದಲ್ಲಿ 48 ವಾರಗಳಿಗೆ, ಸೊರಬ 51 ವಾರಗಳಿಗೆ ಮತ್ತು ತೀರ್ಥಹಳ್ಳಿಯಲ್ಲಿ 51 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ.
- - -(ಬಾಕ್ಸ್) ಜಿಲ್ಲೆಯಲ್ಲಿನ ಮಳೆ ಕೊರತೆಯನ್ನು ನಿರ್ವಹಿಸಲು ಜಿಲ್ಲಾಡಳಿತವು ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಹಾಗೂ ರೈತ ಬಾಂಧವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು.
- ಪ್ರಭುಲಿಂಗ ಕವಳಿಕಟ್ಟಿ, ಡಿಸಿ, ಶಿವಮೊಗ್ಗ.- - -
-18ಎಸ್‌ಎಂಜಿಕೆಪಿ01: ಪ್ರಭುಲಿಂಗ ಕವಳಿಕಟ್ಟಿ