ಸಾರಾಂಶ
ಮಳೆ ಇಲ್ಲದೇ ಇರುವುದರಿಂದ ಭೀಮಾ ನದಿ ಪಾತ್ರದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಕೂಡಲೇ ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ.
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ಭೀಕರ ಬರಗಾಲದಿಂದ ಜನ ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಒಳಗಾಗಿದ್ದು, ಭೀಮಾ ನದಿಯ ಕಾಲುವೆಗಳಲ್ಲಿನ ಹೂಳನ್ನು ಎತ್ತಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ರೈತರಿಗೆ ಅನುಕೂಲವಾಗಲು ಭೀಮಾ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಆದಾಗ್ಯೂ, ಇಲ್ಲಿಯವರೆಗೂ ನಿರ್ಮಾಣಗೊಂಡ ಕಾಲುವೆಗಳಿಗೆ ನೀರು ಹರಿಸದೇ ಇರುವುದರಿಂದ ಕಾಲುವೆಗಳಲ್ಲಿ ಗಿಡಗಂಟಿ ಬೆಳೆದಿದ್ದು, ಅದನ್ನು ಸ್ವಚ್ಛಗೊಳಿಸುವಂತೆ ಮಾಡಿದ ಹೋರಾಟಗಳಿಗೂ ಸಹ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವರ್ಷ ಮಳೆ ಇಲ್ಲದೇ ಇರುವುದರಿಂದ ಭೀಮಾ ನದಿಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದೆ. ಆದ್ದರಿಂದ ಕೆಬಿಜೆಎನ್‍ಎಲ್ ನಂಬರ್ 55,74, 118 ಎಸ್‍ಕೆಪಿಯಿಂದ ಭೀಮಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಇಳುವರಿ ತೋರಿಸುವಲ್ಲಿ ಹಾಗೂ ತೂಕದಲ್ಲಿ ಮೋಸ ಮಾಡುತ್ತಿದ್ದು, ಅದನ್ನು ತಪ್ಪಿಸುವಂತೆ ಆಗ್ರಹಿಸಿದರು.ಕಳೆದ 2022-2023ನೇ ಸಾಲಿನಲ್ಲಿ ರೈತರಿಗೆ ಬರಬೇಕಾದ ಬಾಕಿ ಹಣ ಪಾವತಿಲು ನಿರ್ದೇಶನ ನೀಡುವಂತೆ, ಭೀಮಾ ನದಿಗೆ ನಿರ್ಮಿಸಲಾದ ಬ್ಯಾರೇಜ್‍ಗಳಲ್ಲಿ ನೀರು ಹರಿದು ಹೋಗುತ್ತಿರುವುದನ್ನು ತಪ್ಪಿಸಲು ಎಲ್ಲ ಬ್ಯಾರೇಜ್‍ಗಳಿಗೆ ಗೇಟ್ ಹಾಕಿ ನೀರು ಸಂಗ್ರಹ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಭೀಮಾ ನದಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರ ಕೊಡುವಂತೆ, ಭೀಮಾ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಬಳೂಂಡಗಿ, ಅಳ್ಳಗಿ ಪಂಪ್ ಹೌಸ್‍ಗಳನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಿ ಕಾಲುವೆಗಳಿಗೆ ನೀರು ಬಿಡುವಂತೆ, ಪಂಪ್ ಹೌಸ್‍ಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಗೌರವ ಧನ ನೀಡಿ ಅನುಕೂಲ ಕಲ್ಪಿಸುವಂತೆ, ಬಳೂಂಡಗಿ ಮತ್ತು ಅಳ್ಳಗಿ ಪಂಪ್ ಹೌಸ್ ದುರಸ್ತಿ ಟೆಂಡರ್ ಪ್ರಕ್ರಿಯೆ ಮುಗಿಸಿ ರೈತರ ಭೂಮಿಗೆ ನೀರು ಹರಿಸುವಂತೆ ಅವರು ಆಗ್ರಹಿಸಿದರು.ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀಮಂತ್ ಬಿರಾದಾರ್, ಸಿದ್ದು ಸಣ್ಣೂರ್, ಗುರು ಚಾಂದಕವಟೆ, ಅರ್ಜುನ್ ಕುಂಬಾರ್, ಅಶೋಕ್ ಹೂಗಾರ್ ಪಾಲ್ಗೊಂಡಿದ್ದರು.