ಸಿಆರ್‌ಝಡ್ ಉಲ್ಲಂಘನೆ ವಿರುದ್ಧ ಕ್ರಮ: ಈಶ್ವರ ಖಂಡ್ರೆ

| Published : Feb 07 2024, 01:51 AM IST

ಸಿಆರ್‌ಝಡ್ ಉಲ್ಲಂಘನೆ ವಿರುದ್ಧ ಕ್ರಮ: ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಆರ್‌ಝಡ್‌ ನಿಯಮ ಉಲ್ಲಂಘಿಸಿ ಅನೇಕ ಕಟ್ಟಡಗಳು ನಿರ್ಮಾಣವಾಗಿವೆ. ಈ ಕುರಿತು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಉಲ್ಲಂಘಿಸಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿ ಅವುಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪರಿಸರ ಮತ್ತು ಅರಣ್ಯ ಇಲಾಖೆಯ ಪರಾಮರ್ಶನಾ ಸಭೆ ನಡೆಸಿ ಅವರು ಮಾತನಾಡಿದರು. ಸಿಆರ್‌ಝಡ್‌ ನಿಯಮ ಉಲ್ಲಂಘಿಸಿ ಅನೇಕ ಕಟ್ಟಡಗಳು ನಿರ್ಮಾಣವಾಗಿವೆ. ಈ ಕುರಿತು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಮಂಗಳೂರು ವೃತ್ತದಲ್ಲಿ ಸೆಕ್ಷನ್ 4 ಆಗಿ ಸೆಕ್ಷನ್ 17 ಆಗದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು. ಒಂದೇ ಸರ್ವೇ ನಂಬರ್‌ನಲ್ಲಿ ಸಾವಿರಾರು ಎಕರೆ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಪ್ರದೇಶಗಳಲ್ಲಿ ತ್ವರಿತವಾಗಿ ಜಂಟಿ ಸರ್ವೇ ನಡೆಸಿ ಸಮಸ್ಯೆ ಪರಿಹರಿಸಲು ಸೂಚಿಸಿದರು.ಕಾಂಡ್ಲಾ ವನ ಬೆಳೆಸಲು ಸೂಚನೆ: ಕಡಲ ಕೊರೆತ ತಡೆಯಲು ಕಾಂಡ್ಲಾ ವನ (ಮ್ಯಾಂಗ್ರೋ)ಗಳನ್ನು ಬೆಳೆಸುವಂತೆ ಮತ್ತು ಕಡಲ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಿದರು. ತ್ಯಾಜ್ಯ ನೀರು ಪರಿಶೀಲನೆ: ಪರಿಸರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯ ಮತ್ತು ರಾಸಾಯನಿಕ ತ್ಯಾಜ್ಯ ಸಂಸ್ಕರಣೆ ಆಗದೆ ಫಲ್ಗುಣಿ ನದಿಯನ್ನು ಸೇರುತ್ತಿದೆ ಎಂಬ ಬಗ್ಗೆ ದೂರುಗಳಿದ್ದು, ಈ ಬಗ್ಗೆ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ನಿಯಮ ಪಾಲಿಸದ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ದುರ್ನಾತ ಬರುತ್ತಿರುವ ಮತ್ಸ್ಯ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ, ಎಲ್ಲ ಘಟಕಗಳೂ ಪ್ರಮಾಣಿತ ಮಾನದಂಡಗಳನ್ನು ಪಾಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.ಸ್ಯಾಟಲೈಟ್‌ ಪರಿಶೀಲನೆ: ಅರಣ್ಯ ಒತ್ತುವರಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವರು ಶುಂಠಿ ಬೆಳೆಯುವ ಹೆಸರಲ್ಲಿ 3 ಎಕರೆ 5 ಎಕರೆ ಭೂಮಿ ಗುತ್ತಿಗೆ ಪಡೆದು ಅಥವಾ ಖರೀದಿಸಿ ಸುತ್ತಮುತ್ತಲಿನ ಅರಣ್ಯ ನಾಶ ಮಾಡುತ್ತಿದ್ದಾರೆ ಎಂಬ ದೂರಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಲ ಕಾಲಕ್ಕೆ ಸ್ಯಾಟಲೈಟ್ ಚಿತ್ರಗಳ ಮೂಲಕ ಪರಿಶೀಲನೆ ನಡೆಸಿ, ಅರಣ್ಯನಾಶವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಖಂಡ್ರೆ ಸೂಚಿಸಿದರು.