ಬಹಮನಿ ಕೋಟೆಯೊಳಗಿನ ದೇವಾಲಯ ಜೀರ್ಣೋದ್ಧಾರಕ್ಕೆ ಆಗ್ರಹ

| Published : Feb 07 2024, 01:50 AM IST

ಬಹಮನಿ ಕೋಟೆಯೊಳಗಿನ ದೇವಾಲಯ ಜೀರ್ಣೋದ್ಧಾರಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯ ಬಹಮನಿ ಕೋಟೆಯಲ್ಲಿ 12ನೇ ಶತಮಾನದ ದೇಗುಲವಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಕೋಟೆಯೊಳಗಿನ ಸೋಮವೇಶ್ವರ ಮಂದಿರ ಜೀರ್ಣೋದ್ಧಾರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗೃತ ಸೇನೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರದಲ್ಲಿರುವ ಬಹಮನಿ ಕೋಟೆಯೊಳಗಿರುವ ಸ್ವಯಂಭು ಶಿವಲಿಂಗವಿರುವ ಸೋಮೇಶ್ವರ ಮಂದಿರ ಜೀರ್ಣೋದ್ಧಾರ ಮಾಡಬೇಕು, ಅಲ್ಲಿ ಶಿವಲಿಂಗ ಪ್ರತಿಷ್ಠಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜಾಗೃತ ಸೇನೆ ಕಾರ್ಯಕರ್ತರು ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಗಮನ ಸೆಳೆದರು.

ಒಂದು ವೇಳೆ ಕಲಬುರಗಿ ಸಮಸ್ತ ಹಿಂದು ಬಾಂಧವರ ಈ ಮನವಿಗೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದಲ್ಲಿ ಇದೇ ಶಿವರಾತ್ರಿ ದಿನವೇ ಕೋಟೆಯಲ್ಲಿರುವ ದೇಗುಲದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸುತ್ತೇವೆ ಎಂದು ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯ ಬಹಮನಿ ಕೋಟೆಯಲ್ಲಿ 12ನೇ ಶತಮಾನದ ದೇಗುಲವಿದೆ. ಈ ಕೋಟೆಯನ್ನು ಚಾಲುಕ್ಯರು, ರಾಷ್ಟ್ರಕೂಟರು, ವಾರಂಗಲ್‌ ಅರಸರು, ರಾಜಾ ಗುಲಚಂದ್‌ ಇವರೆಲ್ಲರೂ ಆಳಿದ್ದಾರೆ. ಈ ಅರಸರ ಕಾಲದಲ್ಲಿ ಕೋಟೆಯೊಳಗೆ ಸೋಮೇಶ್ವರ ಸ್ವಯಂಭು ಶಿವಲಿಂಗ ದೇವಾಲಯ ನಿರ್ಮಿಸಿದ್ದಾರೆ. ಈ ಕೋಟೆಯೊಳಗೆ ಇಂದಿಗೂ ಶಿಥಿಲವಾದಂತಹ ದೇವಲಾಯವೂ ಇದೆ. ಹೀಗಾಗಿ ಕೋಟೆಯೊಳಗಿನ ಸೋಮವೇಶ್ವರ ಮಂದಿರ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕೋಟೆಯೊಳಗೆ ಭೆಟಿ ನೀಡಿ ಮಂದಿರ ವೀಕ್ಷಣೆ ಮಾಡಿ ಸ್ಥಳೀಯ ಹಾಗೂ ಇತಿಹಾಸಕಾರರಿಂದ ಮಾಹಿತಿ ಪಡೆದು ತಕ್ಷಣ ಕ್ರಮಕ್ಕೆ ಮುಂದಾಗಬೇಕೆಂದು ಜಿಲ್ಲಾಡಳಿತಕ್ಕೆ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳಿಗೂ ಈ ವಿಷಯ ಗೊತ್ತಿದೆ. ಅವರೊಂದಿಗೂ ಚರ್ಚೆ ಮಾಡಬೇಕು, ದೇವಸ್ಥಾನ ಜೀರ್ಣೋದ್ಧಾರವಾಗಬೇಕು. ಕಲಬುರಗಿಗೆ ಸ್ವಯಂಭು ಸೋಮೇಶ್ವರ ದೇಗುಲದ ದರ್ಶನವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದು ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷೀಕಾಂತ ಸ್ವಾದಿ, ಸೇನೆಯ ವಿವಿಧ ಪದಾಧಿಕಾರಿಗಳಾದ ನಂದಕುಮಾರ್‌ ನಾಯಕ್‌, ಸಿದ್ದು ಕಂದಗಲ್‌, ದಶರಥ ಇಂಗೋಳೆ, ಸಂಗಮೇಶ ಕಾಳಗನೂರ್‌, ಮಹಾದೇವ ಕೋಟನೂರ್‌, ಚೇತನ್‌ ಪಾಟೀಲ್‌, ಪ್ರಕಾಶ ವಾಘಮಾರೆ, ರಾಜು ಕಮಲಾಪುರೆ, ರಾಜು ಸ್ವಾಮಿ, ಚಿದಾನಂದ ಸ್ವಾಮಿ, ಗುರು ಸ್ವಾಮಿ, ರಾಕೇಶ ಮಠ ಸೇರಿದಂತೆ ಅನೇಕರು ಇಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು.