ಕೃಷಿ ಮತ್ತು ಜಾನಪದ ಕಲೆ ನಮ್ಮ ಮಣ್ಣಿನ ಸಂಸ್ಕೃತಿಯ ಎರಡು ಕಣ್ಣುಗಳು. ಆಧುನಿಕತೆಯ ಅಬ್ಬರದಲ್ಲಿ ನಾವು ನಮ್ಮ ಮೂಲ ಬೇರು ಮರೆಯಬಾರದು

ಗಂಗಾವತಿ: ಇಲ್ಲಿಯ ಕೆಂಧೋಳೆ ರಾಮಣ್ಣ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಕೃಷಿ ದಿನಾಚರಣೆ ಹಾಗೂ ಜಾನಪದ ಜಾತ್ರೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಾಗಭೂಷಣ ಶಿವಾಚಾರ್ಯರು ಅವರು ಸಂಸ್ಥಾಪಕ ಅಧ್ಯಕ್ಷರಾಗಿದ್ದ ಕೃಷ್ಣಪ್ಪ ಕೆಂದೋಳೆ ಸ್ಮರಣಾರ್ಥ ನಿರ್ಮಾಣಗೊಂಡ ವೇದಿಕೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಕೃಷಿ ಮತ್ತು ಜಾನಪದ ಕಲೆ ನಮ್ಮ ಮಣ್ಣಿನ ಸಂಸ್ಕೃತಿಯ ಎರಡು ಕಣ್ಣುಗಳು. ಆಧುನಿಕತೆಯ ಅಬ್ಬರದಲ್ಲಿ ನಾವು ನಮ್ಮ ಮೂಲ ಬೇರು ಮರೆಯಬಾರದು ಎಂದು ಕೃಷಿ ಚಟುವಟಿಕೆಗಳ ಮಹತ್ವ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ, ನಮ್ಮ ನೆಲದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ ಎಂದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸರಸ್ವತಿ ಮಾತನಾಡಿ, ಗ್ರಾಮೀಣ ಸಂಸ್ಕೃತಿಯ ಪರಿಚಯ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯ ಕಲಿಸುತ್ತದೆ ಎಂದು ತಿಳಿಸಿದರು.

ಎಸ್‌ಕೆಆರ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಾನಂದ ಮೇಟಿ ರೈತರ ಶ್ರಮ ಶ್ಲಾಘಿಸಿ, ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಬೆವರು ಮತ್ತು ತ್ಯಾಗವಿದೆ. ನೈಸರ್ಗಿಕ ವಿಕೋಪಗಳ ನಡುವೆಯೂ ದೇಶದ ಆಹಾರ ಭದ್ರತೆ ಕಾಪಾಡುವ ರೈತನೇ ದೇಶದ ನಿಜವಾದ ಬೆನ್ನೆಲುಬು. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯ ಮದ್ದಾನಪ್ಪ ಶಾಲೆಯ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಎಸ್‌ಕೆಆರ್ ಸಮೂಹ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕಲ್ಯಾಣಿ ವಹಿಸಿದ್ದರು. ವೇದಿಕೆಯ ಮೇಲೆ ಗೌರವ ಅಧ್ಯಕ್ಷ ಪ್ರಮೀಳಾಬಾಯಿ ಕೃಷ್ಣ ಕೆಂಧೋಳೆ, ವಡ್ಡರಹಟ್ಟಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ, ಸಂಸ್ಥೆಯ ಕಾರ್ಯದರ್ಶಿ ರಾಮ್ ಮೋಹನ್, ಕೃಷ್ಣ ಕೆಂಧೋಳೆ, ಸದಸ್ಯರಾದ ವೆಂಕಟೇಶ್ ಕಲ್ಯಾಣಿ, ಮತ್ತು ಯಶ್ವಂತ್ ಕೆಂಧೋಳೆ, ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯ ದಿವಾಕರ ಹಿರೇಮಠ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.