ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಡಕೆ ಬೆಳೆ ವಾಣಿಜ್ಯ ಬೆಳೆಯೂ ಹೌದು , ಧಾರ್ಮಿಕ ಸಂಕೇತವು ಹೌದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ನಿಯಮಿತ ಇಲ್ಲಿನ ಪಿಇಎಸ್ ಪ್ರೇರಣ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ಮಲೆನಾಡು ಭಾಗ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆದು ಅತಿ ಹೆಚ್ಚಿನ ಅಡಿಕೆ ಬೆಳೆಯುವ ಪ್ರದೇಶ ಎಂದು ದೇಶದಲ್ಲಿ ಗುರುತಿಸಿಕೊಂಡಿದೆ. ಈ ಮೂಲಕ ರಾಜ್ಯದ ಮತ್ತು ದೇಶದ ಆರ್ಥಿಕತೆಗೆ ತನ್ನದೇ ಅತ್ಯಮೂಲ್ಯ ಕೊಡುಗೆ ನೀಡುತ್ತಿದೆ ಎಂದರು.
ಇದಕ್ಕೆ ಪೂರಕವಾಗಿ ಸಹಕಾರ ಕ್ಷೇತ್ರವು ಅಡಿಕೆ ಬೆಳೆಯುವ ಸಣ್ಣ ವರ್ಗದ ರೈತರಿಗೆ ಸಂದರ್ಭಕ್ಕೆ ಅನುಗುಣವಾಗಿ ಅಗತ್ಯ ಆರ್ಥಿಕ ನೆರವು ನೀಡುತ್ತಾ ಸ್ವಾವಲಂಬಿ ಜೀವನ ನಡೆಸಲು ಬೆಂಬಲವಾಗಿ ನಿಂತಿದೆ. ಕೊಳೆ ರೋಗ ಸೇರಿದಂತೆ ಇನ್ನಿತರ ಕಷ್ಟಕರ ಸಂದರ್ಭದಲ್ಲಿ ಕೂಡ ರೈತರಿಗೆ ಬೆಂಬಲವಾಗಿ ನಿಂತಿರುವುದು ಮಾದರಿಯಾಗಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ ಕೂಡ ಅಡಕೆ ಬೆಳೆಯುವ ರೈತರಿಗೆ ಉತ್ತೇಜಿಸುವಂತ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿ ಈಗಾಗಲೇ ಅಗತ್ಯ ಬೆಂಬಲ ನೀಡುತ್ತಿದೆ. ಅಡಿಕೆ ಮೇಲಿನ ಹೊಸ ರೀತಿಯ ಸಂಶೋಧನೆಗಳಿಗೆ ಸೂಕ್ತ ಅನುದಾನ ನೀಡುತ್ತಿದೆ. ಬೆಳೆ ನಷ್ಟ ಸಂದರ್ಭದಲ್ಲಿ ಕೂಡ ಪರಿಹಾರ ನೀಡಿ ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಿದೆ ಎಂದರು.
ಇಷ್ಟೆ ಅಲ್ಲದೆ ಅಡಕೆ ಕೇವಲ ಒಂದು ಬೆಳೆಯಾಗಿ ನಮ್ಮ ನಡುವೆ ಉಳಿದಿಲ್ಲ. ಬದಲಾಗಿ ಹಿಂದೂ ಧಾರ್ಮಿಕ ಆಚರಣೆಗಳ ಪದ್ಧತಿಯಲ್ಲಿ ಅಡಿಕೆಗೆ ವಿಶೇಷ ಸ್ಥಾನಮಾನವಿದೆ. ಅಡಿಕೆ ಬೆಳೆ ಒಂದು ವಾಣಿಜ್ಯ ಬೆಳೆಯು ಹೌದು, ಧಾರ್ಮಿಕ ಸಂಕೇತವು ಹೌದು ಎಂದು ಹೇಳಲು ಹೆಮ್ಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಸಚಿವಾಲಯದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ರೈತರಿಗೆ ಇನ್ನಷ್ಟು ಅಗತ್ಯ ಅನುಕೂಲ ಮಾಡಿಕೊಡುವ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪ್ರಮುಖರಾದ ಮಹೇಶ್ , ಕೀರ್ತಿಗೌಡ , ವಿರೂಪಾಕ್ಷಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.