ಸಾರಾಂಶ
ಸೈಟ್ ಹಂಚಿಕೆ ವೇಳೆ ಅಲ್ಲೇ ಬೇಕು ಇಲ್ಲೇ ಬೇಕು ಎನ್ನುವಂತಿಲ್ಲ. ಚೀಟಿ ಎತ್ತುವ ಮೂಲಕ ಸೈಟ್ ಹಂಚಿಕೆ ಮಾಡಲಾಗುತ್ತದೆ. ಎಲ್ಲಿ ಯಾರಿಗೆ ಬರುತ್ತದೆಯೋ ಅಲ್ಲಿ ಪಡೆದುಕೊಳ್ಳಬೇಕು ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
ಕಾರವಾರ: ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನಿರ್ಮಿಸಲು ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣದ ಸಂತ್ರಸ್ತರ ಸ್ಥಳಾಂತರಕ್ಕೆ ಜಾಗ ಗುರುತಿಸಲಾಗಿದ್ದು, ಚೀಟಿ ಎತ್ತುವ ಮೂಲಕ ಸೈಟ್ ನೀಡಲಾಗುತ್ತದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂತ್ರಸ್ತರ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬೊಗ್ರಿಬೈಲಿನಲ್ಲಿ ಹರಿಜನ ಸಮುದಾಯದವರು ಇರಲು ಒಪ್ಪಿಗೆ ನೀಡಿದ್ದಾರೆ. ಅವರದ್ದು ೧೮ ಕುಟುಂಬವಿದೆ. ಎಲ್ಲರಿಗೂ ಒಂದೇ ಕಡೆ ಬೇಕು ಎನ್ನುತ್ತಿದ್ದಾರೆ.
ಹೀಗಾಗಿ ೧೮ ಕುಟುಂಬಕ್ಕೆ ಹೊಂದುವಂತೆ ಜಾಗ ಗುರುತಿಸಿ ಹೊಸ ಸರ್ವೆ ಮಾಡಲು ತೀರ್ಮಾನ ಮಾಡಲಾಗಿದೆ. ಅದೇ ರೀತಿ ಬೇಲೆಕೇರಿ ಭಾಗದವರು ಕವಲಳ್ಳಿಯಲ್ಲಿ ಕೇಳಿದ್ದು, ಅಲ್ಲಿಯೇ ನೀಡಲಾಗುತ್ತದೆ. ಅಲಗೇರಿಯ ದೈವಜ್ಞ ಹಾಗೂ ಆಚಾರಿ ಸಮುದಾಯದ ಎಲ್ಲರಿಗೂ ಹೊಸಗದ್ದೆಯಲ್ಲಿ ಸೈಟ್ ನೀಡಲು ತೊಂದರೆಯಗಿದ್ದು, ೮ ಸೈಟ್ ಹೆಚ್ಚುವರಿಯಾಗಿ ಬೇಕಾಗುತ್ತದೆ. ಹೆಚ್ಚುವರಿ ಸೈಟ್‌ನ್ನು ಬೆಳಸೆಯಲ್ಲಿ ನೀಡುವ ಉದ್ದೇಶವಿದೆ ಎಂದರು.ಸೈಟ್ ಹಂಚಿಕೆ ವೇಳೆ ಅಲ್ಲೇ ಬೇಕು ಇಲ್ಲೇ ಬೇಕು ಎನ್ನುವಂತಿಲ್ಲ. ಚೀಟಿ ಎತ್ತುವ ಮೂಲಕ ಸೈಟ್ ಹಂಚಿಕೆ ಮಾಡಲಾಗುತ್ತದೆ. ಎಲ್ಲಿ ಯಾರಿಗೆ ಬರುತ್ತದೆಯೋ ಅಲ್ಲಿ ಪಡೆದುಕೊಳ್ಳಬೇಕು. ಈ ಬಗ್ಗೆ ಸಂತ್ರಸ್ತರೊಂದಿಗೆ ಈಗಾಗಲೆ ಮಾತನಾಡಿದ್ದು ಒಪ್ಪಿಗೆ ನೀಡಿದ್ದಾರೆ. ಹಂಚಿಕೆ ವೇಳೆ ಹಕ್ಕುಪತ್ರವನ್ನೂ ನೀಡುತ್ತೇವೆ ಎಂದರು.ಹೆಚ್ಚುವರಿ ಸೈಟ್ ಗುರುತಿಸಲು ಶಾಸಕ ಸೈಲ್ ಸೂಚನೆ
ಸಭೆಯಲ್ಲಿ ಹರಿಜನ ಸಮುದಾದವರು ಮಾತನಾಡಿ, ತಾವೆಲ್ಲರೂ ತಲೆತಲಾಂತರದಿಂದ ಅಲಗೇರಿಯಲ್ಲಿ ಒಟ್ಟಾಗಿ ವಾಸವಾಗಿದ್ದು, ಎಲ್ಲರೂ ಒಟ್ಟಾಗಿಯೇ ಇರಬೇಕು ಎನ್ನುವುದು ನಮ್ಮ ಆಸೆಯಾಗಿದೆ. ಜತೆಗೆ ಗ್ರಾಪಂ ಕೂಡಾ ಬದಲಾಗುವುದು ಬೇಡ ಎನ್ನುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಬೊಗ್ರಿಬೈಲ್‌ನಲ್ಲಿಯೇ ಎಲ್ಲ ೧೮ ಕುಟುಂಬಕ್ಕೆ ಅವಕಾಶ ಮಾಡಿಕೊಡುವಂತೆ ಕೊರಿದರು. ಬೊಗ್ರಿಬೈಲಿನಲ್ಲಿ ಕೇವಲ ೧೧ ಸೈಟ್ ಮಾತ್ರ ಗುರುತು ಮಾಡಲಾಗಿದೆ. ೧೮ ಕುಟುಂಬಗಳಿದ್ದು, ಎಲ್ಲರಿಗೂ ಒಂದೇ ಕಡೆ ಸೈಟ್ ನೀಡುವುದು ಕಷ್ಟವಾದ ಕಾರಣ ಮನವೊಲಿಸಲು ಯತ್ನಿಸಿದರು. ಬಳಿಕ ಪುನಃ ಸರ್ವೆ ನಡೆಸಿ ಹೆಚ್ಚುವರಿ ಸೈಟ್ ಗುರುತಿಸಲು ಶಾಸಕ ಸತೀಶ ಸೈಲ್ ಸೂಚಿಸಿದರು.