ಸಾರಾಂಶ
ವಿವಿ ಸಾಗರ ಜಲಾಶಯಕ್ಕೆ ಗಂಗಾಪೂಜೆ, ಬಾಗಿನ ಕಾರ್ಯಕ್ರಮ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಹೇಳಿಕೆಕನ್ನಡಪ್ರಭ ವಾರ್ತೆ ಹಿರಿಯೂರು:
ನೀರಾವರಿ ಕ್ಷೇತ್ರಕ್ಕೆ 1,274 ಕೋಟಿ ರು.ಗಳ ಯೋಜನೆ ತಯಾರಿಸಿದ್ದೇವೆ. ಅದರ ಜಾರಿಯ ನಂತರ ಡ್ರೈ ಲ್ಯಾoಡ್‌ಗಳಿಗೂ ನೀರು ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ವಿವಿ ಪುರದ ಬಿ.ಎಲ್.ಗೌಡ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ಜಲ ಸಂಪನ್ಮೂಲ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವತಿಯಿಂದ ವಿವಿ ಸಾಗರ ಜಲಾಶಯಕ್ಕೆ ನಡೆದ ಗಂಗಾಪೂಜೆ ಮತ್ತು ಬಾಗಿನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ವಿವಿ ಸಾಗರ ಆಣೆಕಟ್ಟು ಕರ್ನಾಟಕದಲ್ಲಿ ನಿರ್ಮಾಣವಾದ ಮೊದಲ ಜಲಾಶಯ. ಮಹಾರಾಣಿಯವರು ತಮ್ಮ ಒಡವೆಗಳನ್ನು ಅಡವಿಟ್ಟು ಆ ಕಾಲಕ್ಕೆ 45 ಲಕ್ಷ ವೆಚ್ಚದಲ್ಲಿ ಜಲಾಶಯ ನಿರ್ಮಾಣ ಮಾಡಿದ್ದಾರೆ. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಆಣೆಕಟ್ಟು ಕಟ್ಟಿ ರೈತರನ್ನು ಉಳಿಸುವ ಕೆಲಸ ಮೈಸೂರು ಅರಸರು ಮಾಡಿದರು. ಜಿಲ್ಲೆಯ ಹಲವು ತಾಲೂಕುಗಳಿಗೆ ಈ ಕೆರೆ ಜೀವನಾಡಿ. ಈಗಾಗಲೇ 1,274 ಕೋಟಿ ರು. ಸಮಗ್ರ ನೀರಾವರಿ ಯೋಜನೆ ತಯಾರು ಮಾಡಿದ್ದೇವೆ. ಆ ಯೋಜನೆ ಜಾರಿಯಾದರೆ ಒಣ ಬೇಸಾಯ ಭೂಮಿಗಳಿಗೂ ನೀರು ಸಿಗಲಿದೆ ಎಂದರು. ಭದ್ರಾ ಮೇಲ್ದಂಡೆ ಸ್ಥಗೀತವಾಗಿಲ್ಲ. ಗುತ್ತಿಗೆದಾರರಿಗೆ ಈ ವರ್ಷವೂ ಸಹ 800 ಕೋಟಿ ಹಣ ಪಾವತಿಸಲಾಗಿದೆ.ಇಲ್ಲಿನ ಬಿಜೆಪಿ ಲೋಕಸಭಾ ಸದಸ್ಯರು ನೀರಾವರಿ ಮಂತ್ರಿಗಳಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದಿದ್ದರು. ಆದರೆ ಅವರಿಂದ ಅದು ಆಗಲಿಲ್ಲ. ಅಪ್ಪರ್ ಭದ್ರಾ ಯೋಜನೆಗಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ 5,300 ಕೋಟಿ ಪತ್ತೆ ಇಲ್ಲ. ಬಿಜೆಪಿ ಸಂಸದರಾರು ಆ ಹಣದ ಬಿಡುಗಡೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಅನೇಕ ಬಿಜೆಪಿ ಸಂಸದರು ಕೇಂದ್ರ ನಾಯಕರ ಬಳಿ ಈ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿಗಳಿಗೆ, ನೀರಾವರಿ ಸಚಿವರಿಗೆ, ಅರ್ಥ ಸಚಿವರಿಗೆ ನಾವು ಅನೇಕ ಬಾರಿ ಮನವಿ ಮಾಡಿದರು ಸಹ ಅವರು ಇದುವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಕೊಟ್ಟ ಮಾತು ಬಿಜೆಪಿಯವರು ಎಂದೂ ಉಳಿಸಿಕೊಳ್ಳಲ್ಲ. ನೀರಾವರಿ ಕ್ಷೇತ್ರಕ್ಕೆ ಬಿಜೆಪಿಯಿಂದ ಅನ್ಯಾಯವಾಗಿದೆ. 2022ರಲ್ಲಿ ಹಿನ್ನೀರಿನಿಂದ ಹೊಸದುರ್ಗ ತಾಲೂಕಿನ ಹಳ್ಳಿಗಳಿಗೆ ತೊಂದರೆ ಆಗಿತ್ತು. ಇದೀಗ 120 ಕೋಟಿಯ ಯೋಜನೆ ತಯಾರು ಮಾಡಿದ್ದು ಮುಳುಗಡೆ ಭೀತಿ ತಪ್ಪಿಸುತ್ತಿದ್ದೇವೆ. ನಾವು ನೀಡಿದ 5 ಭರವಸೆಗಳನ್ನು ಜಾರಿ ಮಾಡಿದ್ದೇವೆ. ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುತ್ತಿದ್ದೇವೆ. 56 ಸಾವಿರ ಕೋಟಿ ಹಣವನ್ನು ಜನರಿಗಾಗಿ ನೀಡುತ್ತಿದ್ದೇವೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಹಳೆಯ ಆಣೆಕಟ್ಟಾಗಿದ್ದು, ಇಲ್ಲಿ ನೀರು ನಿರಂತರವಾಗಿರಲಿ ಎಂದು ಬಾಗಿನ ಅರ್ಪಿಸಿದ್ದೇವೆ. ಜಿಲ್ಲೆಯ ಜನ ಈ ಅಣೆಕಟ್ಟನ್ನು ಹೆಚ್ಚಿನದಾಗಿ ಅವಲಂಬಿಸಿದ್ದೀರಿ. ನಮ್ಮ ಸರ್ಕಾರ ಇದ್ದಾಗ ಈ ಭಾಗವನ್ನು ಎತ್ತಿನಹೊಳೆ ಯೋಜನೆಗೆ ಸೇರಿಸಿದ್ದೆವು. ಮುಂದಿನ ಬಜೆಟ್‌ನಲ್ಲಿ ಈ ಭಾಗಕ್ಕೂ ಒಂದು ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿದ್ದೇವೆ ಎಂದರು.ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ. ರಾಹುಲ್ ಗಾಂಧಿಯವರ ಪಾದಯಾತ್ರೆ ಸಂದರ್ಭದಲ್ಲಿ ಈ ಜಿಲ್ಲೆಯ ಜನ ಸಾಕಷ್ಟು ಸಹಕಾರ ನೀಡಿದ್ದೀರಿ. ಈ ರಾಜ್ಯದ ಜನರ ಋಣ ಕಾಂಗ್ರೆಸ್ ತೀರಿಸಲಿದೆ. ಚಿತ್ರದುರ್ಗದ 8 ಕೆರೆಗಳನ್ನು ತುಂಬಿಸುವ ಯೋಜನೆ ಇದೆ. ಕೇಂದ್ರದಿಂದ ಅನ್ಯಾಯವಾಗಿದ್ದು, ಅನುದಾನ ನೀಡುವಲ್ಲಿ ಅವರು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಅವರಿಂದ ಒಂದು ಬಿಡಿಗಾಸು ಬರುತ್ತಿಲ್ಲ. ಮೈಸೂರು ಸಂಸದರು ಅವಸರವಸರವಾಗಿ ಬಂದು ಬಾಗಿನ ಬಿಟ್ಟು ಹೋಗಿದ್ದಾರೆ. ತೊಂದರೆ ಇಲ್ಲ. ನಾವು ನೀರಿನ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ವಿವಿ ಸಾಗರ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರ ರಾಜಕಾರಣ ಮಾಡದೇ ಹಣ ಬಿಡುಗಡೆ ಮಾಡಿ ಭದ್ರಾ ಯೋಜನೆ ಪೂರ್ಣಗೊಳ್ಳಲು ಸಹಕರಿಸಬೇಕು ಎಂದರು.ಸಚಿವ ಡಿ.ಸುಧಾಕರ್ ಮಾತನಾಡಿ, ಇದು ನನ್ನ ಜೀವಮಾನದ ಅವಿಸ್ಮರಣೀಯ ದಿನ. ಜಿಲ್ಲೆಯ ಜೀವನಾಡಿ ವಿವಿ ಸಾಗರ ಜಲಾಶಯ ತುಂಬಿದೆ. ಭದ್ರಾ ಯೋಜನೆ ಕಾಮಗಾರಿಯನ್ನು 2025 ರೊಳಗೆ ಮುಗಿಸಿಕೊಡುವಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ವಿವಿ ಸಾಗರ ಜಲಾಶಯವನ್ನು ಪ್ರವಾಸಿ ತಾಣ ಮಾಡಬೇಕು. ಜೆಜಿ ಹಳ್ಳಿ, ಧರ್ಮಪುರ ಹೋಬಳಿ ಕೆರೆಗಳನ್ನು ತುಂಬಿಸಲು ಈಗಾಗಲೇ ಅನುದಾನಕ್ಕೆ ಮನವಿ ಮಾಡಿದ್ದೇನೆ. ಹೊಸದುರ್ಗ ಭಾಗದ ರೈತರಿಗೆ ಆಗಿರುವ ಹಾನಿ ಬಗ್ಗೆಯೂ ಮುಖ್ಯಮಂತ್ರಿಗಳು ಗಮನ ಹರಿಸಲಿದ್ದಾರೆ ಎಂದರು.
ಈ ವೇಳೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಚಳ್ಳಕೆರೆ ಶಾಸಕ ರಘುಮೂರ್ತಿ, ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲ ಕೃಷ್ಣ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮೇಲ್ಮನೆ ಸದಸ್ಯ ಡಿ.ಟಿ. ಶ್ರೀನಿವಾಸ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ತಹಸೀಲ್ದಾರ್ ರಾಜೇಶ್ ಕುಮಾರ್, ಡಿಸಿಸಿ ಅಧ್ಯಕ್ಷ ತಾಜ್ ಪೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.