ಆರೋಗ್ಯದ ಜವಾಬ್ದಾರಿ ಇಂದೇ ತೆಗೆದುಕೊಳ್ಳಿ: ಶಿವನಕೆರೆ ಬಸವಲಿಂಗಪ್ಪ

| Published : Jan 24 2025, 12:46 AM IST

ಸಾರಾಂಶ

ಕೇವಲ ವೈದ್ಯರ ಸಲಹೆ ಅಷ್ಟೇ ಅಲ್ಲ. ನಿಮ್ಮ ಆರೋಗ್ಯ ಮತ್ತು ಜೀವವನ್ನು ಕಾಪಾಡುವ ಮೊದಲ ಹೆಜ್ಜೆ. ದೊಡ್ಡ ದೊಡ್ಡ ಕಾಯಿಲೆಗಳನ್ನು ಪ್ರಾರಂಭದಲ್ಲಿ ಪತ್ತೆ ಮಾಡಲು ಮತ್ತು ನಂತರದ ಚಿಕಿತ್ಸೆಗೆ ಈ ಪರೀಕ್ಷೆಗಳು ಅತ್ಯಗತ್ಯ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಹೇಳದರು.

ಚಿಕಿತ್ಸೆಗಿಂತ ರೋಗ ತಡೆಗಟ್ಟವುದು ಜಾಣರ ಲಕ್ಷಣ । 40 ಜನರಿಗೆ ರಕ್ತ ಪರೀಕ್ಷೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಪಿ, ಶುಗರ್ ವರ್ಷಕ್ಕೆ ಒಂದು ಬಾರಿ ಪರೀಕ್ಷೆ ಮಾಡಿಸುವುದು ಕೇವಲ ವೈದ್ಯರ ಸಲಹೆ ಅಷ್ಟೇ ಅಲ್ಲ. ನಿಮ್ಮ ಆರೋಗ್ಯ ಮತ್ತು ಜೀವವನ್ನು ಕಾಪಾಡುವ ಮೊದಲ ಹೆಜ್ಜೆ. ದೊಡ್ಡ ದೊಡ್ಡ ಕಾಯಿಲೆಗಳನ್ನು ಪ್ರಾರಂಭದಲ್ಲಿ ಪತ್ತೆ ಮಾಡಲು ಮತ್ತು ನಂತರದ ಚಿಕಿತ್ಸೆಗೆ ಈ ಪರೀಕ್ಷೆಗಳು ಅತ್ಯಗತ್ಯ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಹೇಳದರು.

ನಗರದ ಅರಿವು ಬಳಗದಿಂದ ಗುರುವಾರ ಮುಂಜಾನೆ ಇಲ್ಲಿನ ಕೊಂಡಜ್ಜಿ ರಸ್ತೆಯ ಕೆಲವು ಭಾಗಗಳಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ರಕ್ತ ಪರೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಬಿಪಿ, ಶುಗರ್, ಹೃದಯ, ಕಡ್ನಿ, ಲಿವರ್ ಸಂಬಂಧಿ ಕಾಯಿಲೆಗಳು ಸರ್ವೇಸಾಮಾನ್ಯವಾಗಿವೆ. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಆಹಾರ ಪದ್ಧತಿ ಮತ್ತು ಅಸಮರ್ಪಕ ಜೀವನ ಶೈಲಿ. ಇತ್ತೀಚೆಗೆ ಚಿಕ್ಕ ಚಿಕ್ಕ ಮಕ್ಕಳಲ್ಲಿ ಇಂತಹ ಕಾಯಿಲೆಗಳನ್ನು ನೋಡುತ್ತಿದ್ದೇವೆ. ಆದ್ದರಿಂದ 25 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಈ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು ಎಂದು ಹೇಳಿದರು.

ಈ ಸುಲಭ ಪರೀಕ್ಷೆಗಳನ್ನು ಉದಾಸೀನ ಮಾಡಿದರೆ ಭಯಾನಕ ಕಾಯಿಲೆಗಳು ಕಟ್ಟಿಟ್ಟ ಬುತ್ತಿ. ಚಿಕಿತ್ಸೆಗಿಂತ ರೋಗಗಳನ್ನು ತಡೆಗಟ್ಟುವುದು ಜಾಣರ ಲಕ್ಷಣ. ಈ ಪರೀಕ್ಷೆಗಳು ಸುಲಭ ಸರಳ ಮತ್ತು ಕಡಿಮೆ ಸಮಯದಲ್ಲಿ ನಿಮ್ಮ ಅಕ್ಕಪಕ್ಕದಲ್ಲೇ ಮಾಡಿಸಿಕೊಳ್ಳುವಂತಹವು. ಗಂಭೀರ ಸಮಸ್ಯೆಗಳು ಆಗುವ ಮೊದಲು ಎಚ್ಚೆತ್ತುಕೊಳ್ಳೋಣ. ಬಿಪಿ, ಶುಗರ್, ಖಚಿತವಾದಲ್ಲಿ ಹೆದರಬೇಡಿ. ಸೂಕ್ತ ಚಿಕಿತ್ಸೆ ತೆಗೆದುಕೊಂಡು ನಿಮ್ಮ ಆರೋಗ್ಯದ ಜವಾಬ್ದಾರಿ ಇಂದೇ ತೆಗೆದುಕೊಳ್ಳಿ ಎಂದು ಕರೆ ನೀಡಿದರು.

ಈ ಶಿಬಿರದಲ್ಲಿ ಅರಿವು ಬಳಗದ ಬಿ.ಓ.ಮಲ್ಲಿಕಾರ್ಜುನ್, ಸುನೀಲ್, ಪ್ರಕಾಶ್ ಎಂ.ಸಿದ್ದಪ್ಪ, ಪ್ರಭುಸ್ವಾಮಿ, ಜಯರಾಜ್, ಎನ್.ಪಿ. ಜಯಣ್ಣ ಇತರರು ಇದ್ದರು. ಈ ಭಾಗದ ಸುಮಾರು 40 ಜನರು ರಕ್ತ ಪರೀಕ್ಷೆ ಮಾಡಿಸಿಕೊಂಡರು.