ದೇವರಾಜ ಅರಸು ಜಯಂತಿ ಅದ್ಧೂರಿ ಆಚರಣೆಗೆ ಸಕಲ ಸಿದ್ಧತೆ

| Published : Sep 19 2025, 01:00 AM IST

ಸಾರಾಂಶ

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘನ ಉಪಸ್ಥಿತಿ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉಪಸ್ಥಿತಿ ಇರಲಿದ್ದು, ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ರಾಮನಗರ

ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ಸೆ.19ರಂದು ಶುಕ್ರವಾರ ಆಯೋಜಿಸಿರುವ ಡಿ.ದೇವರಾಜ ಅರಸು 110ನೇ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ದೇವರಾಜ ಅರಸು ಜಯಂತಿಗಾಗಿ ಬೃಹತ್ ವೇದಿಕೆ ಸಿದ್ಧಪಡಿಸಿದ್ದು, ಹಿಂದುಳಿದ ಜಾತಿಗಳ ಶಕ್ತಿ ಪ್ರದರ್ಶನ ನಡೆಯಲಿದೆ.

ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಮತ್ತು ತಂಡ ಜಿಲ್ಲಾದ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣಪುಟ್ಟ ಸಮುದಾಯಗಳನ್ನು ಒಗ್ಗೂಡಿಸಿದ್ದು, ಇದಕ್ಕೆ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಮಾರಂಭದಲ್ಲಿ ಸುಮಾರು 20ರಿಂದ 25 ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ.

ನಗರದ ಕೆಂಪೇಗೌಡ ವೃತ್ತದಿಂದ ಹಳೇ ಬಸ್ ನಿಲ್ದಾಣ, ಎಂ.ಜಿ.ರಸ್ತೆ ಮಾರ್ಗವಾಗಿ ಜೂನಿಯರ್ ಕಾಲೇಜು ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಆನೆ ಮೇಲೆ ಮತ್ತು ಬೆಳ್ಳಿ ರಥದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆ ನಡೆಯಲಿದೆ.ಇದರ ಮುಂಭಾಗ ವಿವಿಧ ಸಮುದಾಯಗಳ ಸಂಸ್ಕೃತಿ ಅನಾವರಣಗೊಳ್ಳಲಿದೆ.

ಕುಂಬಾರ ಸಮುದಾಯದ 100 ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗುವರು. ವಿಶ್ವಕರ್ಮ ಸಮಾಜದಿಂದ ಪಂಚಪೀಠ ಸಂಸ್ಕೃತಿ ಅನಾವರಣಗೊಂಡರೆ, ಕುರುಬು ಸಮುದಾಯದವರು ಡೊಳ್ಳು ಕುಣಿತ, ವೀರಗಾಸೆ, ಈಡಿಗ ಸಮುದಾಯದವರು ಬ್ರಹ್ಮಶ್ರೀ ನಾರಾಯಣಗುರು, ಡಾ.ರಾಜ್ ಕುಮಾರ್, ಡಾ.ಪುನೀತ್ ರಾಜ್ ಕುಮಾರ್ ಮತ್ತಿತರ ನಾಯಕರ ಟ್ಯಾಬ್ಲೊ, ರಜಪೂತ ಸಮುದಾಯವೂ ರಾಣ ಪ್ರತಾಪ್ ಸಿಂಗ್ ಭಾವಚಿತ್ರದ ಟ್ಯಾಬ್ಲೊ ಪ್ರದರ್ಶನ ಮಾಡಲಿದ್ದಾರೆ.

ಯಾದವ (ಗೊಲ್ಲ) ಸಮುದಾಯದ 100 ಮಂದಿ ಕೃಷ್ಣ ವೇಷಧಾರಿಗಳು, ಸವಿತಾ ಸಮಾಜದ 500 ಯುವಕರು ಏಕ ಕಾಲದಲ್ಲಿ ನಾದಸ್ವರ ನುಡಿಸಲಿದ್ದು, ಬೆಸ್ತ ಸಮುದಾಯ ಸಂಸ್ಕೃತಿ ಅನಾವರಣಗೊಳಿಸಿದರೆ, ದೇವಾಂಗ ಸಮುದಾಯದವರು ನೇಯ್ಗೆ ಕಸುಬು ಪರಿಚಯ ಮಾಡಿಕೊಡುವರು. ಮಡಿವಾಳ ಸಮುದಾಯದವರು ಮಾಚೀದೇವರು, ತಿಗಳ ಸಮುದಾಯದವರು ಅಗ್ನಿ ಬನ್ನಿದೇವ ಹಾಗೂ ಕರಗ ಹೊತ್ತು ತರಲಿದ್ದಾರೆ. ಗಾಣಿಗ ಸಮುದಾಯದವರು ಸ್ತಬ್ಧಚಿತ್ರದೊಂದಿಗೆ ಹೆಜ್ಜೆ ಹಾಕುವರು. ದೊಂಬಿದಾಸ ಸಮುದಾಯವದರು ಬೀದಿ ನಾಟಕ ಪ್ರದರ್ಶನ ಮಾಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 15 ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತುಂಬಲಿದ್ದು, 500ಕ್ಕೂ ಹೆಚ್ಚು ಯುವಕರು ಬೈಕ್ ರ್ಯಾಲಿ ನಡೆಸಲಿದ್ದಾರೆ. ಈ ರೀತಿ ಮೆರವಣಿಗೆ ಉದ್ದಕ್ಕೂ ವಿವಿಧ ಸಮುದಾಯಗಳ ಕಲಾ ಸಂಸ್ಕೃತಿ ಅನಾವರಣಗೊಳ್ಳಲಿದೆ.

ಹೊಲಿಗೆ ಯಂತ್ರ ವಿತರಣೆ:

ಜೂನಿಯರ್ ಕಾಲೇಜು ಮೈದಾನದ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ಹಿಂದುಳಿದ ಸಮುದಾಯದ 600 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗುವುದು. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 200ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 60 ಮಂದಿಯನ್ನು ಸನ್ಮಾನ ಮಾಡಲಾಗುವುದು. ಪ್ರತಿ ತಾಲೂಕಿನಿಂದ ಸಾಧನೆ ಮಾಡಿದ ಒಬ್ಬರಿಗೆ 25 ಸಾವಿರ ರು. ನಗದು, ಪ್ರಶಸ್ತಿ ಹಾಗೂ ದೇವರಾಜ ಅರಸು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಪೊಲೀಸ್ ಅಧಿಕಾರಿಗಳಿಂದಲೂ ವೀಕ್ಷಣೆ:

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಪೊಲೀಸ್ ಅಧಿಕಾರಿಗಳೊಂದಿಗೆ ಮೆರವಣಿಗೆ ಆರಂಭವಾಗುವ ಹಾಗೂ ಸಾಗುವ ಮಾರ್ಗವನ್ನು ವೀಕ್ಷಿಸಿದರು. ಅಲ್ಲದೆ, ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.ಬಾಕ್ಸ್‌.................

ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ:

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘನ ಉಪಸ್ಥಿತಿ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉಪಸ್ಥಿತಿ ಇರಲಿದ್ದು, ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ಡಾ.ಸಿ.ಎನ್.ಮಂಜುನಾಥ್, ಡಾ.ಕೆ.ಸುಧಾಕರ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್ .ರವಿ, ಸುಧಾಮ್ ದಾಸ್, ರಾಮೋಜಿಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ‘ಜಿಲ್ಲೆಯಲ್ಲಿ ಹಿಂದುಳಿದ ಸಮುದಾಯಗಳು ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ಅರಸು ಭವನ ನಿರ್ಮಾಣ, ಅರ್ಹ ಫಲಾನುಭವಿಗಳಿಗೆ ನಿವೇಶನ, ಮನೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆದು ಈಡೇರಿಸಿಕೊಳ್ಳುವುದು. ಜೊತೆಗೆ ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸುವುದು ಒಕ್ಕೂಟದ ಉದ್ದೇಶವಾಗಿದೆ.’

- ರೈಡ್ ನಾಗರಾಜ್, ಜಿಲ್ಲಾಧ್ಯಕ್ಷರು, ಹಿಂದುಳಿದ ಜಾತಿಗಳ ಮಹಾ ಒಕ್ಕೂಟ, ಬೆಂ.ದಕ್ಷಿಣ

‘ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 110ನೇ ಜಯಂತಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇಲ್ಲಿ ಸಣ್ಣಪುಟ್ಟ ಸಮುದಾಯಗಳ ಕಲೆ, ಸಂಸ್ಕೃತಿ ಅನಾವರಣಗೊಳ್ಳಲಿದೆ. ಇದು ಹಿಂದುಳಿದ ವರ್ಗಗಳ ಒಗ್ಗಟ್ಟನ್ನು ಪ್ರದರ್ಶಿಸಲಿದೆ.’

- ಟಿ.ವಿ.ನಾರಾಯಣ್ , ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ, ಬೆಂ.ದಕ್ಷಿಣ.