ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಬಿಸಿಲಿನೂರು ಎಂದೇ ಕರೆಯಲ್ಪಡುವ ವಿಜಯಪುರ ಜಿಲ್ಲೆಯಲ್ಲಿ ಈಗ ಮಲೆನಾಡಿನ ತಂಪಾದ ಅನುಭವ ನೀಡುವ ಅದ್ಭುತ ಪ್ರವಾಸಿ ತಾಣವೊಂದು ರೂಪುಗೊಂಡಿದ್ದು, ಸಾವಳಸಂಗ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಿರುವ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಈಗ ಉದ್ಘಾಟನೆಗೆ ಸಜ್ಜಾಗಿದ್ದು, ಎಲ್ಲ ಚಿತ್ತ ಉದ್ಯಾವನದತ್ತ ನೆಟ್ಟಿದೆ.

ದೂರದೃಷ್ಟಿಯ ಚಿಂತನೆ: ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು 2020 ಹಾಗೂ 2022ರಲ್ಲಿ ಸಾವಳಸಂಗ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ವನ ವೀಕ್ಷಣೆ ಮಾಡುವುದರೊಂದಿಗೆ ಪ್ರವಚನ ನೀಡಿದ್ದರು. ಅಂದೇ ಈ ಸುಂದರ ತಾಣವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವಂತೆ ಸ್ವಾಮೀಜಿಗಳ ಸಮ್ಮುಖದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ನೀಡಿದ್ದ ಭರವಸೆಯಂತೆ ಇಂದು ಈ ಯೋಜನೆ ಸಾಕಾರಗೊಂಡಿದೆ.

2024ರ ಡಿಸೆಂಬರ್ 23ರಂದು ವೃಕ್ಷೋದ್ಯಾನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಇಂದು ಶಾಸಕರ ಪರಿಶ್ರಮದ ಫಲವಾಗಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ.


ಈಗಲೇ ಜನಸಾಗರ: ಉದ್ಯಾವನ ಉದ್ಘಾಟನೆಗೂ ಮುನ್ನವೇ ಇಲ್ಲಿಗೆ ಜನಸಾಗರವೇ ಹರಿದು ಬರುತ್ತಿದೆ. ಸಾಮಾನ್ಯ ದಿನಗಳಲ್ಲಿ ಸುಮಾರು 2,000 ಹಾಗೂ ರಜಾ ದಿನಗಳಲ್ಲಿ ಅಂದಾಜು 6,000 ದಿಂದ 7,000 ಪ್ರವಾಸಿಗರು ಭೇಟಿ ನೀಡಿ ಪ್ರಕೃತಿಯ ಸೌಂದರ್ಯ ಸವಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಸ್ಥಳದ ಖ್ಯಾತಿ ಎಲ್ಲೆಡೆ ಹಬ್ಬಲು ಶಾಸಕರ ಈ ಜನಪರ ಯೋಚನೆ ಕಾರಣವಾಗಿದೆ.

₹2.60 ಕೋಟಿ ಅನುದಾನ:ಒಟ್ಟು ₹2.60 ಕೋಟಿ ರೂಪಾಯಿಗಳ ಅನುದಾನದಲ್ಲಿ ಈ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ವಿಶೇಷ ಕಾಳಜಿ ವಹಿಸಿ ವಿವಿಧ ಯೋಜನೆಗಳಡಿ ₹90 ಲಕ್ಷ ಅನುದಾನ ತರುವ ಮೂಲಕ ಅಭಿವೃದ್ಧಿಗೆ ದೊಡ್ಡ ಮಟ್ಟದ ಆರ್ಥಿಕ ಬೆಂಬಲ ಒದಗಿಸಿದ್ದಾರೆ.

ಏನಿದೆ ವಿಶೇಷ ಆಕರ್ಷಣೆ?:ವಿಜ್ಞಾನ ವನ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಕಲಿಕಾ ಮಟ್ಟ ಉತ್ತೇಜಿಸುವ ಉದ್ದೇಶದಿಂದ ವಿಜ್ಞಾನ ವನ ನಿರ್ಮಿಸಲಾಗಿದೆ.ಗ್ರಾಮೀಣ ಸಂಸ್ಕೃತಿಯ ಪರಿಚಯ ಹಾಗೂ ಮೆಲುಕು ಹಾಕಲು ಸೂಕ್ತವಾದ ತಾಣವಾಗಿದೆ.

ಅವಳಿ ಜಿಲ್ಲೆಯಲ್ಲೇ ಪ್ರಥಮ ಜಿಪ್ಲೈನ್: ಸಾಹಸ ಪ್ರಿಯ ಯುವಕರಿಗಾಗಿ ಶಾಸಕರ ವಿಶೇಷ ಕಾಳಜಿಯಿಂದ ಇಲ್ಲಿ ಬರೋಬ್ಬರಿ 300 ಮೀಟರ್ ಉದ್ದದ ಜಿಪ್ಲೈನ್ ಅಳವಡಿಸಲಾಗಿದೆ. ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿಯೇ ಇದು ಪ್ರಥಮ ಎಂಬುದು ಇಂಡಿ ಕ್ಷೇತ್ರಕ್ಕೆ ಸಿಕ್ಕ ಹೆಮ್ಮೆಯ ಗರಿಯಾಗಿದೆ.

ಚಾರಣ: ಹೊರ್ತಿಯಿಂದ 5 ಕಿ.ಮೀ ದೂರದಲ್ಲಿ ಇಂಚಿಗೇರಿಗೆ ತೆರಳುವ ರಸ್ತೆಯಲ್ಲಿರುವ ಸಾವಳಸಂಗ ಬೆಟ್ಟದ ಸಾಲುಗಳನ್ನು ಸಾಹಸಿ ಯುವಜನರಿಗೆ ಹಾಗೂ ಪ್ರವಾಸಿಗರಿಗೆ ಮುಕ್ತವಾಗಿಸುವಲ್ಲಿ ಶಾಸಕರ ಪಾತ್ರ ಹಿರಿದಾಗಿದೆ.

ಪ್ರಮುಖ ಗುಡ್ಡಗಳು: ಇಲ್ಲಿ ಲಿಂಗೇಶ್ವರ ಗುಡ್ಡ, ಅರವಕ್ಕಿ ಗುಡ್ಡ ಮತ್ತು ಸಿದ್ದೇಶ್ವರ ಗುಡ್ಡ ಎಂಬ ಮೂರು ಪ್ರಮುಖ ತಾಣಗಳಿವೆ.

ವನ್ಯ ಸಂಪತ್ತು: ಈ ಅರಣ್ಯ ಧಾಮದಲ್ಲಿ ನವಿಲು, ನರಿ, ಮೊಲ, ಹಾವು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ನೆಲೆಸಿವೆ. ಪ್ರವಾಸಿಗರು ಕುಳಿತು ಊಟ ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಎರಡು ಪ್ಯಾರಾಗೋಲಗಳನ್ನು ನಿರ್ಮಿಸಲಾಗಿದೆ.