ಕನ್ನಡಪ್ರಭ ವಾರ್ತೆ ಬಾಗೂರು

ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆಯಾಗದೆ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಬಂದಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೋಬಳಿಯ ಮಾದಗೊಂಡನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಸ್ವಾಸ್ಥ್ಯ ಯೋಜನೆ ವತಿಯಿಂದ ಸುಮಾರು ₹65 ಲಕ್ಷ ವೆಚ್ಚದ ನೂತನ ಆರೋಗ್ಯ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಆರ್‌ಎಸ್‌ ಕಬಿನಿ ಹಾರಂಗಿ ಹೇಮಾವತಿ ಜಲಾಶಯಗಳಿಗೆ ನಿರೀಕ್ಷೆ ಎಷ್ಟು ಮಳೆಯಾಗದೆ ಜುಲೈ ತಿಂಗಳು ಬಂದರು ಹೆಚ್ಚಿನ ನೀರು ಶೇಖರಣೆಗೊಂಡಿಲ್ಲ. ಸದ್ಯ ರಾಜ್ಯ ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ಒಪ್ಪಂದವನ್ನೇ ಮಾನದಂಡವಾಗಿ ಇಟ್ಟುಕೊಂಡು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಸುವ ಮೂಲಕ ರಾಜ್ಯ ಸರ್ಕಾರಕ್ಕೆ ಸೂಕ್ತ ಆದೇಶ ನೀಡಬೇಕು. ಮುಖ್ಯಮಂತ್ರಿಗಳು ರಾಜ್ಯದ ರೈತರ ಹಿತ ಕಾಪಾಡದೇ ತಮಿಳುನಾಡಿನ ರೈತರಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಭಾಗದಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.ಗ್ರಾಮದಲ್ಲಿ ₹ 65 ಲಕ್ಷ ಲೆಕ್ಕದಲ್ಲಿ ನೂತನ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಈ ಭಾಗದ ಜನರಿಗೆ ಮುಂಬರುವ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಜೊತೆಗೆ ಸಮುದಾಯ ಭವನ ನಿರ್ಮಾಣ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಗ್ರಾಮದ ಕೆರೆಗೆ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕಳೆದ ವರ್ಷದಿಂದ ನೀರು ಹರಿಸಲಾಗುತ್ತಿದೆ. ಈ ಹಿಂದೆ ಕೆರೆಗೆ ಅಳವಡಿಸಿದ ಪೈಪುಗಳಲ್ಲಿ ಸಣ್ಣಪುಟ್ಟ ದೋಷದ ಹಿನ್ನೆಲೆಯಲ್ಲಿ ಹೊಸ ಪೈಪ್ ಅಳವಡಿಸಲಾಗಿದೆ. ಈ ವರ್ಷ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಚಿಕ್ಕಮಗಳೂರು ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕಳೆದ 4 ದಿನಗಳಿಂದ ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ದೇವರ ಕೃಪೆಯಿಂದ ಮಳೆ ಹೀಗೆ ಮುಂದುವರಿದು ಜಲಾಶಯ ಬೇಗ ತುಂಬಲಿ. ತಾಲೂಕಿನಲ್ಲಿ ಜುಲೈ ತಿಂಗಳು ಬಂದರೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಯಾಗದೆ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇದು ಹೀಗೆ ಮುಂದುವರಿದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ರಾಜ್ಯ ಸರ್ಕಾರವನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ಮರಿ ದೇವೇಗೌಡ, ಮಾಜಿ ಗ್ರಾಪಂ ಅಧ್ಯಕ್ಷರಾದ ಭೂದೇಶ್, ರಂಗೇಗೌಡ, ಮಾಜಿ ಗ್ರಾಪಂ ಉಪಾಧ್ಯಕ್ಷರಾದ ಶಿವರಾಜು, ರಾಮು, ಕೃಷಿ ಪತ್ತಿನ ನಿರ್ದೇಶಕ ವೆಂಕಟರಾಮು, ಮುಖಂಡರಾದ ಹುಲಿಕೆರೆ ಸಂಪತ್ ಕುಮಾರ್‌, ದೊರೆಸ್ವಾಮಿ, ಜಯರಾಮ್, ಬಾಬು, ಆನಂದ್, ರಂಗನಾಥ, ಸ್ವಾಮಿ, ರಾಮಚಂದ್ರು, ರಘು, ಶಿವರಾಜ್, ಸಿದ್ದೇಶ್, ತಮ್ಮಯ್ಯ, ಗುತ್ತಿಗೆದಾರ ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.====

ಫೋಟೋ:

ಮಾದಗೊಂಡನಹಳ್ಳಿ ಗ್ರಾಮದಲ್ಲಿ ನೂತನ ಆರೋಗ್ಯ ಘಟಕ ನಿರ್ಮಾಣಕ್ಕೆ ಶಾಸಕ ಸಿ ಎನ್ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.