ಧಾರವಾಡ:
ಬಗೆ-ಬಗೆಯ ತಿಂಡಿ-ತಿನಿಸು, ಜಾನಪದ ನೃತ್ಯ, ಹಾಡುಗಳು. ಹಳ್ಳಿ ಸೊಗಡಿನ ಸೀರೆ, ಲಂಗ-ದಾವನಿ ಹಾಗೂ ಕುರ್ತಾ ಸೇರಿದಂತೆ ಸಾಂಪ್ರದಾಯಿಕ ಉಡುಗೆ ತೊಡುಗೆಯಿಂದ ನಗು-ನಗುತ್ತಾ ಓಡಾಡುತ್ತಿರುವ ಪುಟ್ಟ ಪೋರರು.ಈ ದೃಶ್ಯಗಳು ಕಂಡು ಬಂದಿದ್ದು ರಂಗಾಯಣದ ಮಕ್ಕಳ ಶಿಬಿರದಲ್ಲಿ. ಜಾತಿ, ಭೇದ-ಭಾವ, ಬಡವ-ಶ್ರೀಮಂತ ಎಂಬ ಭಾವನೆ ತೊರೆದು ಕೃಷಿ ಸಂಸ್ಕೃತಿ, ಧಾರ್ಮಿಕ ನಂಬಿಕೆ ಮತ್ತು ಸಾಮಾಜಿಕ ಐಕ್ಯತೆ ಸಾರುವ ಅಲ್ಲಿಕೇರಿಯನ್ನು ಚಿಣ್ಣರ ಮೇಳದ ಭಾಗವಾಗಿ ಆಚರಿಸಲಾಯಿತು. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿ ಅಲ್ಲಿಕೇರಿ ಆಚರಿಸಲಾಗುತ್ತದೆ. ಇದು ಸಹಬಾಳ್ವೆ ಮತ್ತು ಏಕತೆಯ ಸಂಕೇತವಾಗಿದೆ.ನಾಡಿಗೆ ಮಳೆ, ಬೆಳೆ ಸಮೃದ್ಧಿಯಾಗಿ ಸಿಗಲಿ ಎಂದು ಊರಿನ ಜನರು, ಕುಟುಂಬದವರೆಲ್ಲರೂ ಹೋಲಗಳಲ್ಲಿ ಸೇರಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೃಷಿ ಆಧಾರಿತ ಸಂಸ್ಕೃತಿಯ ಪ್ರತೀಕವೂ ಅಲ್ಲಿಕೇರಿ ಹಬ್ಬವಾಗಿದೆ.ದಿನ ಕಳೆದಂತೆ ಈ ಹಬ್ಬವು ಮರೆಯಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಗ್ರಾಮೀಣ ಸಂಪ್ರದಾಯಗಳ ಕುರಿತು ತಿಳಿಸುವ ಪ್ರಯತ್ನವನ್ನು ಧಾರವಾಡ ರಂಗಾಯಣ ಮಾಡಿತು. ಜಾನಪದ ಹಾಡುಗಾರರಾದ ರಾಮು ಮೂಲಗಿ ಅಲ್ಲಿಕೇರಿಯ ಕುರಿತ ಹಾಡು, ರಂಗಾಯಣದ ರೆಪರ್ಟರಿ ಕಲಾವಿದರು ದೊಡ್ಡಾಟದ ಕುಣಿತ, ಜಾನಪದ ನೃತ್ಯ ಹಾಗೂ ಹಾಡುಗಳು ಪಾಲಕರು ಹಾಗೂ ಮಕ್ಕಳ ಮನಸನ್ನು ಮುದಗೊಳಿಸಿದವು. ಶಿಬಿರದ ಮಕ್ಕಳು ತಮ್ಮ ಪಾಲಕರೊಂದಿಗೆ ಈ ಹಬ್ಬ ಆಚರಿಸಿ ಮನೆಯಿಂದ ಪಾಲಕರು ತಯಾರಿಸಿಕೊಂಡು ಬಂದ ಕರ್ಚಿಕಾಯಿ, ಗೋದಿಹುಗ್ಗಿ, ಬಜ್ಜಿಗಳು, ರೊಟ್ಟಿ, ವಿವಿಧ ಕಾಳು ಪಲ್ಯ, ಉಂಡೆಗಳು ಸೇರಿದಂತೆ ವಿವಿಧ ತರಹದ ಅಡುಗೆಗಳ ಸವಿಯನ್ನು ಒಟ್ಟಾಗಿ ಕುಳಿತು ಸವಿಯುವ ಮೂಲಕ ಅಲ್ಲಿಕೇರಿಯ ಮಹತ್ವ ತಿಳಿದುಕೊಂಡರು. ಚಿಣ್ಣರ ಮೇಳದ ಸಂಚಾಲಕರಾದ ಅರುಣಕುಮಾರ ಮೇದಾರ, ತರಬೇತುದಾರರಾದ ರಾಜ್ ಕವಡೆನವರ, ಸಂಗೀತಗಾರ ಸುನಂದಾ ನಿಂಬನಗೌಡರ, ರಂಗಾಯಣ ರೆಪರ್ಟರಿ ಕಲಾವಿದರು ಇದ್ದರು.