ಕನ್ನಡಪ್ರಭ ವಾರ್ತೆ ಉಡುಪಿ

ಭರತನಾಟ್ಯದಂತಹ ಶ್ರೀಮಂತ ಕಲೆಯನ್ನು ಕರಗತ ಮಾಡಿಕೊಳ್ಳುವುದೇ ಒಂದು ಕಲೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಮೋಹನ ಆಳ್ವ ಹೇಳಿದರು.

ಅವರು ಇಲ್ಲಿನ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ನಡೆದ ವಿದುಷಿ ಪ್ರವಿತಾ ಅಶೋಕ್ ದಂಪತಿ ಮಕ್ಕಳಾದ ಪೂರ್ವಿ ಮತ್ತು ಗಾರ್ಗಿದೇವಿಯವರ ರಂಗಪ್ರವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಾವಿದರನ್ನು ಒಗ್ಗೂಡಿಸುವ ಆಶಯ: ಕಲೆ ಮತ್ತು ಸಂಸ್ಕೃತಿಗಳ ಸಮ್ಮಿಲನದಂತೆ, ಗುರುಗಳ ಪರಿಶ್ರಮ, ಆಶಯದಂತೆ ಭರತನಾಟ್ಯದ ಶಾಸ್ತ್ರೀಯತೆಗೆ ತಕ್ಕಂತೆ ರಂಗಪ್ರವೇಶ ಮೂಡಿಬಂದಿದೆ ಎಂದರಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಭರತನಾಟ್ಯ ಕಲಾವಿದೆಯರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಮಾಡುವ ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಚಿತ್ಕಲಾ ನೃತ್ಯ ಶಾಲೆಯ ಭರತನಾಟ್ಯ ಕಲಾವಿದ ಪಿ. ಪ್ರವೀಣ್ ಕುಮಾರ್ ಮಾತನಾಡಿ ಕಲಾವಿದೆಯರು ನೀಡಿದ ಒಂದೊಂದು ನೃತ್ಯ ಪ್ರದರ್ಶನದಲ್ಲಿಯೂ ಅವರದ್ದೇ ಆದ ಅನನ್ಯತೆ ಮತ್ತು ಸ್ವಂತದ್ದಾದ ಶೈಲಿ ಎದ್ದು ಕಾಣುತ್ತಿತ್ತು. ಇಬ್ಬರೂ ಕಲಾವಿದರಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.


ಇನ್ನೋರ್ವ ಅತಿಥಿ ಆಗಮಿಸಿದ್ದ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಕೆ.ಚಂದ್ರಶೇಖರ ನಾವಡ ಮಾತನಾಡಿ ತುಂಬಾ ಸಂದರ್ಭದಲ್ಲಿ ರಂಗಪ್ರವೇಶದ ನಂತರ ಭರತನಾಟ್ಯದ ಬಗ್ಗೆ ಕೆಲವರು ಆಸಕ್ತಿ ಕಡಿಮೆ ಮಾಡಿಕೊಂಡುಬಿಡುತ್ತಾರೆ. ಆದರೆ ರಂಗಪ್ರವೇಶದ ನಂತರವು ಭರತನಾಟ್ಯವನ್ನು ಇನ್ನೂ ಹೊಸತನದ ನೆಲೆಯಲ್ಲಿ ಪ್ರಸ್ತುತ ಪಡಿಸಬೇಕು ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿಗಳಾದ ಡಾ.ಕರುಣಾ ವಿಜಯೇಂದ್ರ ಮಾತನಾಡಿ ಕಲಾವಿದೆಯರು ಮನಸಿಗೆ ಮುಟ್ಟುವಷ್ಟು ನೃತ್ಯದ ರಸದೌತಣ ಉಣಬಡಿಸಿದ್ದಾರೆ. ಗುರುಗಳ ಸರಿಯಾದ ಮಾರ್ಗದರ್ಶನ ಮತ್ತು ಕಲಾವಿದೆಯರ ಪರಿಶ್ರಮ ನೃತ್ಯದುದ್ದಕ್ಕೂ ಎದ್ದು ಕಾಣುತ್ತಿತ್ತು. ಇವರು ಭರವಸೆಯ ಕಲಾವಿದೆಯರಾಗುವುದು ಖಂಡಿತ ಎಂದು ಹೇಳಿದರು. ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇದರ ನೃತ್ಯ ಗುರು ವಿದುಷಿ ಪ್ರವಿತಾ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಲತಾ ಸಂಗ್ರಾಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.