ಶಿಗ್ಗಾಂವಿ ಉಪಚುನಾವಣೆ : ಖಾದ್ರಿ ತಣ್ಣಗಾದರೂ ಕೈ ಕಾರ್ಯಕರ್ತರಲ್ಲಿ ಕಾಣದ ಒಗ್ಗಟ್ಟು

| Published : Oct 28 2024, 01:17 AM IST / Updated: Oct 28 2024, 01:17 PM IST

Congress flag
ಶಿಗ್ಗಾಂವಿ ಉಪಚುನಾವಣೆ : ಖಾದ್ರಿ ತಣ್ಣಗಾದರೂ ಕೈ ಕಾರ್ಯಕರ್ತರಲ್ಲಿ ಕಾಣದ ಒಗ್ಗಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮುನಿಸು ಶಮನ ಮಾಡುವಲ್ಲಿ ಪಕ್ಷದ ನಾಯಕರು ಯಶಸ್ವಿಯಾಗಿದ್ದಾರೆ. ಆದರೆ, ಕ್ಷೇತ್ರದಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ.

ನಾರಾಯಣ ಹೆಗಡೆ

 ಹಾವೇರಿ : ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮುನಿಸು ಶಮನ ಮಾಡುವಲ್ಲಿ ಪಕ್ಷದ ನಾಯಕರು ಯಶಸ್ವಿಯಾಗಿದ್ದಾರೆ. ಆದರೆ, ಕ್ಷೇತ್ರದಲ್ಲಿ ಎರಡು ಗುಂಪಾಗಿದ್ದ ಕೈ ಕಾರ್ಯಕರ್ತರಲ್ಲಿ ಇನ್ನೂ ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಕೈ ನಾಯಕರು ಮಾಡದ್ದರಿಂದ ಅಸಮಾಧಾನ ಹೊಗೆಯಾಡುತ್ತಲೇ ಇದೆ.

ಶಿಗ್ಗಾಂವಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಯಾಸೀರ್‌ ಖಾನ್ ಪಠಾಣ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಬಳಿಕ ಅಜ್ಜಂಪೀರ್ ಖಾದ್ರಿ ಬೆಂಬಲಿಗರ ಅಸಮಾಧಾನ ಸ್ಫೋಟಗೊಂಡಿತ್ತು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಸೆಡ್ಡು ಹೊಡೆದಿದ್ದ ಖಾದ್ರಿ ಅವರನ್ನು ಕಣದಿಂದ ಹಿಂದಕ್ಕೆ ಸರಿಸಲು ಕೈ ನಾಯಕರು ಪ್ರಯಾಸಪಟ್ಟರೂ ಕೊನೆಗೆ ಅದರಲ್ಲಿ ಯಶಸ್ವಿಯಾಗಿದ್ದಾರೆ. 

ಈ ಬೆಳವಣಿಗೆ ಬಳಿಕ ತಮ್ಮ ಬೆಂಬಲಿಗರನ್ನು ಭೇಟಿಯಾಗಲು ನಾಯಕರು ಖಾದ್ರಿ ಅವರಿಗೆ ಅವಕಾಶ ನೀಡಿಲ್ಲ. ನಾಯಕರ ಮಟ್ಟದಲ್ಲಿ ಸಂಧಾನವಾಗಿದ್ದರೂ ಕ್ಷೇತ್ರದಲ್ಲಿನ ಕೈ ಕಾರ್ಯಕರ್ತರಲ್ಲಿ ಒಮ್ಮತ ಮೂಡಿಸುವ ಪ್ರಯತ್ನ ಇನ್ನೂ ಆಗಿಲ್ಲ. ಇದರಿಂದ ಖಾದ್ರಿ ಬೆಂಬಲಿಗರು ಪಠಾಣ್‌ ಅವರನ್ನು ಬೆಂಬಲಿಸುವ ಮನಸ್ಸು ಮಾಡುತ್ತಿಲ್ಲ ಎನ್ನಲಾಗುತ್ತಿದೆ.

ಇಬ್ಬರ ಬೆಂಬಲಿಗರ ನಡುವೆ ಕಂದಕ: 2023ರ ಚುನಾವಣೆ ಸಂದರ್ಭದಲ್ಲಿ ಯಾಸೀರ್ ಖಾನ್ ಪಠಾಣ್‌ ಅವರಿಗೆ ಕೈ ಟಿಕೆಟ್‌ ನೀಡಿದಾಗಿನಿಂದಲೂ ಶಿಗ್ಗಾಂವಿ ಕಾಂಗ್ರೆಸ್‌ನಲ್ಲಿ ಖಾದ್ರಿ ಮತ್ತು ಪಠಾಣ್ ಬೆಂಬಲಿಗರೆಂಬ ಎರಡು ಗುಂಪುಗಳೇ ಆದವು. ಆ ಬಳಿಕ ಲೋಕಸಭೆ ಚುನಾವಣೆ ನಡೆದಾಗಲೂ ಇಬ್ಬರೂ ಮುಖಂಡರು ಪ್ರತ್ಯೇಕವಾಗಿಯೇ ಪಕ್ಷ ಸಂಘಟನೆ ಮಾಡುತ್ತ ಬಂದಿದ್ದರು. 

ಪಕ್ಷದ ಕಾರ್ಯಕ್ರಮಗಳಲ್ಲಿ ಇಬ್ಬರ ಬೆಂಬಲಿಗರ ಶಕ್ತಿ ಪ್ರದರ್ಶನವೇ ನಡೆಯುತ್ತಿತ್ತು. ಉಪಚುನಾವಣೆ ಖಾತ್ರಿಯಾಗುತ್ತಿದ್ದಂತೆ ಖಾದ್ರಿ ಮತ್ತು ಪಠಾಣ್ ಮತ್ತಷ್ಟು ಕ್ರಿಯಾಶೀಲರಾದರು. ಅದೇ ರೀತಿ ಕಾರ್ಯಕರ್ತರಲ್ಲಿಯೂ ಎರಡು ಗುಂಪಾಗಿದ್ದವು. ಈಗ ಪಠಾಣ್‌ ಅವರಿಗೆ ಟಿಕೆಟ್‌ ಸಿಕ್ಕಿರುವುದು ಅವರ ಬೆಂಬಲಿಗರಲ್ಲಿ ಹುಮ್ಮಸ್ಸು ಮೂಡಿದ್ದರೆ, ಖಾದ್ರಿ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ. ಅದಕ್ಕಾಗಿಯೇ ಖಾದ್ರಿ ಅವರನ್ನು ಪಕ್ಷೇತರರಾಗಿ ನಿಲ್ಲಿಸಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಅವರ ಬೆಂಬಲಿಗರು ನಿಂತಿದ್ದರು. ಈಗ ಮೇಲ್ಮಟ್ಟದಲ್ಲಿ ಹೊಂದಾಣಿಕೆಯೇನೋ ಆಗಿ, ಖಾದ್ರಿ ನಾಮಪತ್ರ ಹಿಂಪಡೆಯುವ ನಿರ್ಧಾರವಾಗಿದೆ. ಆದರೆ, ಕಾರ್ಯಕರ್ತರ ನಡುವಿನ ಕಂದಕ ಮುಚ್ಚುವ ಕೆಲಸ ಆಗಿಲ್ಲ.

ಪಕ್ಷದ ಟಿಕೆಟ್‌ ಗಿಟ್ಟಿಸಿಕೊಂಡಿರುವ ಪಠಾಣ್‌ ಪ್ರಚಾರ ಆರಂಭಿಸಿದ್ದಾರೆ. ಆದರೆ, ಖಾದ್ರಿ ಬೆಂಬಲಿಗರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸವಾಗಿಲ್ಲ. ಇದರಿಂದ ಆಂತರಿಕ ಬೇಗುದಿ ಕುದಿಯುತ್ತಲೇ ಇದೆ. ಮುಂದಿನ ದಿನಗಳಲ್ಲಿ ನಾಯಕರು ಬಂದು ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರೆ ಪಕ್ಷದ ಬಲ ವೃದ್ಧಿಸಲಿದೆ. ಒಂದು ವೇಳೆ ನಾಮಪತ್ರ ಹಿಂಪಡೆದ ಬಳಿಕವೂ ಖಾದ್ರಿ ಹಾಗೂ ಅವರ ಬೆಂಬಲಿಗರು ಕೆಲಸ ಮಾಡದಿದ್ದರೆ ಪ್ರತಿಸ್ಪರ್ಧಿಗಳಿಗೆ ಅನುಕೂಲವಾಗುವ ಸಾಧ್ಯತೆಯಿದೆ. ಕ್ಷೇತ್ರದಲ್ಲಿ ಖಾದ್ರಿ ಸಾಮರ್ಥ್ಯದ ಅರಿವು ಕೈ ನಾಯಕರಿಗೆ ಇದೆ. ಇದೇ ಕಾರಣಕ್ಕೆ ಅವರನ್ನು ಕಣದಿಂದ ಹಿಂದಕ್ಕೆ ಸರಿಸಲು ಇಷ್ಟೊಂದು ಸರ್ಕಸ್‌ ಮಾಡಬೇಕಾಯಿತು ಎನ್ನುವುದು ವಾಸ್ತವ.

ಪಕ್ಷೇತರನಾಗಿ ಸಲ್ಲಿಸಿದ್ದ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಉಪಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಒಮ್ಮೆ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದೇನೆ. ಅದಕ್ಕಾಗಿ ಅ.29ರಂದೇ ಕ್ಷೇತ್ರಕ್ಕೆ ಬರಬೇಕು ಎಂದುಕೊಂಡಿದ್ದೇನೆ. ಪಕ್ಷದ ನಾಯಕರ ಸೂಚನೆಯನ್ನು ಪಾಲಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹೇಳಿದರು.