ಸಾರಾಂಶ
ಆಕರ್ಷಕ ಪಥಸಂಚಲನದಲ್ಲಿ ಪುಟ್ಟ ಮಕ್ಕಳು ಹಾಗೂ ನೆಹರೂ ರಸ್ತೆಯ 87 ವರ್ಷದ ವಿಠ್ಠಲ್ ರಾಮ ಪ್ರಭು ಎನ್ನುವ ವೃದ್ಧರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಭಟ್ಕಳ: ಇಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ 100 ವರ್ಷ ಪರಿಪೂರ್ಣ ಮತ್ತು ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನಕ್ಕೆ ಭಾನುವಾರ ಮಧ್ಯಾಹ್ನ ಪಟ್ಟಣದ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.
ಪಥಸಂಚಲನವು ಎರಡು ಮಾರ್ಗದಲ್ಲಿ ಸಂಚಾರ ಮಾಡಿದ್ದು, ಮೊದಲ ಮಾರ್ಗ ದಿ ನ್ಯೂ ಇಂಗ್ಲಿಷ್ ಸ್ಕೂಲ್ ಮಾರ್ಗವಾಗಿ ಸೋನಾರಕೇರಿ, ಆಸರಕೇರಿ ಮೂಲಕ ಮುಖ್ಯರಸ್ತೆ ಮುಖಾಂತರ ಮಾರಿಕಾಂಬಾ ದೇವಸ್ಥಾನ, ರಥಬೀದಿ- ಹೂವಿನ ಪೇಟೆ ಮಾರ್ಗವಾಗಿ ಮುಖ್ಯ ರಸ್ತೆ ಮೂಲಕ ಪುನಃ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಪಿಎಲ್‌ಡಿ ಬ್ಯಾಂಕ್‌ನ ರಾಷ್ಟ್ರೀಯ ಹೆದ್ದಾರಿ ಮೂಲಕ ವೃತ್ತ ಪ್ರವೇಶಿಸಿತು.ಇನ್ನೊಂದು ಮಾರ್ಗ ನ್ಯೂ ಇಂಗ್ಲಿಷ್ ಸ್ಕೂಲ್ ಮೂಲಕ ಬಂದರ ರಸ್ತೆ ಭಟ್ಕಳ ಸರ್ಕಲ್, ಸಾಗರ ರಸ್ತೆ, ನಾಯಕ ಹೆಲ್ತ್ ಸೆಂಟರ್ ನಾಗಪ್ಪ ನಾಯಕ ರಸ್ತೆ ಮಾರ್ಗವಾಗಿ ಡಿಪಿ ಕಾಲನಿ ರಸ್ತೆ(ಸುಧೀಂದ್ರ ಕಾಲೇಜು ಹಿಂಬಾಗ)- ಮೆಲ್‌ಹಿತ್ಲು ಮೂಲಕ ಹುರುಳಿಸಾಲ್ ಸಾರ್ವಜನಿಕ ಗಣೇಶೋತ್ಸವ ಭವನ, ನಾಗಪ್ಪ ನಾಯಕ ರಸ್ತೆ ಮಾರ್ಗವಾಗಿ ಡಾ. ಚಿತ್ತರಂಜನ ಮನೆ ಕ್ರಾಸ್ ಹಳೆ ವೈಭವ ಎದುರಗಡೆಯಿಂದ ಪುನಃ ವೃತ್ತ ಪ್ರವೇಶಿಸಿತು.
ಈ ವೇಳೆ ಎರಡು ಮಾರ್ಗದಿಂದ ಹೊರಟ ಪಥಸಂಚಲನವು ವೃತ್ತದಲ್ಲಿ ಏಕಕಾಲಕ್ಕೆ ತಲುಪಿ ಪುನಃ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ಸಮಾವೇಶಗೊಂಡಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ್ಯದ ಸಂಚಾಲಕ ಗೋಪಾಲ ಬಳ್ಳಾರಿ ಗಣವೇಷದಾರಿಗಳನ್ನುದ್ದೇಶಿಸಿ ಮಾತನಾಡಿದರು.ಆಕರ್ಷಕ ಪಥಸಂಚಲನದಲ್ಲಿ ಪುಟ್ಟ ಮಕ್ಕಳು ಹಾಗೂ ನೆಹರೂ ರಸ್ತೆಯ 87 ವರ್ಷದ ವಿಠ್ಠಲ್ ರಾಮ ಪ್ರಭು ಎನ್ನುವ ವೃದ್ಧರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪಥಸಂಚಲನದಲ್ಲಿ ಸಾವಿರಕ್ಕೂ ಅಧಿಕ ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.