ಹುಬ್ಬಳ್ಳಿ:

ಪ್ರತಿಯೊಬ್ಬ ಹಿಂದೂಗಳಿಗೂ ಆಶ್ಚರ್ಯವಾಗುವಂತಹ ಅಪ್ಪಟ ಮಾದರಿ ಹಿಂದುತ್ವ ಬಾಬಾ ಸಾಹೇಬ ಅಂಬೇಡ್ಕರ್‌ ಅವರಲ್ಲಿ ಇತ್ತು ಎಂಬುದು ಅಷ್ಟೇ ಸತ್ಯ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಲೋಕಹಿತ ಟ್ರಸ್ಟ್ ಹುಬ್ಬಳ್ಳಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಸಹಯೋಗದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಡಾ. ಸುಧಾಕರ ಹೊಸಳ್ಳಿ ರಚಿಸಿದ ‘ನಾನೂ ಕಾಫಿರ’ ಎಂಬ (ಬಾಬಾ ಸಾಹೇಬರ ಹಿಂದುತ್ವ ಕಥನ) ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ಅಂಬೇಡ್ಕರ್‌ ಹಿಂದೂ ಮತ್ತು ಮುಸ್ಲಿಂರ ಬಗ್ಗೆ ಯಾವ ಭಾವನೆ ಇಟ್ಟುಕೊಂಡಿದ್ದರೂ ಎನ್ನುವುದಕ್ಕೆ ನಾನೂ ಕಾಫಿರ ಎಂಬ ಪುಸ್ತಕದಲ್ಲಿ ಅದ್ಭುತವಾಗಿ ಅನಾವರಣಗೊಳಿಸಲಾಗಿದೆ ಎಂದರು.

ಹಲವು ದಶಕಗಳಿಂದ ಒಂದು ವರ್ಗ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹೇಳಿರುವ ಸುಳ್ಳುಗಳನ್ನೇ ಎಡಪಂಥಿಯರು ಬಂಡವಾಳ ಮಾಡಿಕೊಂಡಿದ್ದಾರೆ ಎಂದ ಅವರು, ಮೀಸಲಾತಿಯಿಂದ ವಂಚಿತರಾದ ಕೆಲವು ಸಮುದಾಯಗಳು ತಮ್ಮ ಬದುಕು ಹಾಳಾಗಲು ಅಂಬೇಡ್ಕರ್ ಘೋಷಿಸಿದ ಮೀಸಲಾತಿ ಕಾರಣ ಎನ್ನುತ್ತಾರೆ. ಸಮ ಸಮಾಜ ನಿರ್ಮಿಸುವಲ್ಲಿ ಅವರು ಶ್ರಮವಹಿಸದೆ ಇರದಿದ್ದರೆ ಇಂದು ದಲಿತರಿಗೆ ಅವಕಾಶ ಇರುತ್ತಿರಲಿಲ್ಲ ಎಂದು ಹೇಳಿದರು.

ಅಂಬೇಡ್ಕರ್‌ ತಾವು ಅನುಭವಿಸಿದ ಕಷ್ಟ, ಅಸ್ಪೃಶ್ಯತೆ ಬೇರೆಯವರು ಅನುಭವಿಸಬಾರದು ಎಂದು ಸರ್ವರಿಗೂ ಸಮಾನತೆ ಬದುಕನ್ನು ನೀಡುವ ಸಂವಿಧಾನ ನೀಡಿದ್ದಾರೆ ಎಂದರು.


ಸಾನ್ನಿಧ್ಯ ವಹಿಸಿದ್ದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಂಕರಾಚಾರ್ಯರ ಬುದ್ಧಿ ಮತ್ಯೆ ಹಾಗೂ ಗೌತಮ ಬುದ್ಧನ ಕರುಣೆಯ ಸಂಗಮವೇ ಅಂಬೇಡ್ಕರ್. ಪ್ರಖರ ವಾಗ್ಮೀ, ಚಿಂತಕ ಹಾಗೂ ಮಾದರಿ ರಾಜಕಾರಣಿಯಾಗಿದ್ದ ಅವರು ಸರ್ವ ಜನಾಂಗವು ಒಪ್ಪಿಕೊಳ್ಳುವ ಮಹಾನ್ ನಾಯಕರಾಗಿದ್ದಾರೆ. ಆದರೆ, ಕೆಲವೊಂದಿಷ್ಟು ಜನರು ಅವರನ್ನು ಒಂದು ಸಮುದಾಯ ಮತ್ತು ಜಾತಿಗೆ ಸೀಮಿತಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿಕಾರ ಡಾ. ಸುಧಾಕರ ಹೊಸಳ್ಳಿ ಮಾತನಾಡಿ, ಅಂಬೇಡ್ಕರ್‌ ಹಿಂದೂ ಧರ್ಮದ ಗುರು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಹಿಂದೂ ಧರ್ಮ ಪುರಾತನ ಯೋಚನೆಯಿಂದ ಹೊರಬಂದು ಅದು ಮತ್ತಷ್ಟು ಪ್ರಜ್ವಲಿಸಬೇಕು ಎಂದು ಅವರು ಸಾರಿದ್ದಾರೆ ಎಂದರು.

ನಾನೂ ಕಾಫಿರ ಕೃತಿಯೂ ಎಡಪಂಥಿಯರನ್ನು ಬೆತ್ತಲೆಗೊಳಿಸುವ ಕೆಲಸ ಮಾಡಿದೆ. ಭಾರತ ಕಟ್ಟುವಲ್ಲಿ ಬಾಬಾ ಸಾಹೇಬರ ಶ್ರಮ ಅಧಿಕವಾಗಿದೆ. ಅವರನ್ನು ಕಡಿಮೆ ಓದಿಕೊಂಡವರಲ್ಲಿ ದೇವನೂರು ಮಹದೇವಪ್ಪನವರು ಒಬ್ಬರಾಗಿದ್ದಾರೆ. ಅವರು ಅಂಬೇಡ್ಕರ್ ಬಗ್ಗೆ ಸಂಪೂರ್ಣವಾಗಿ ಓದಿಕೊಳ್ಳಬೇಕು, ನಂತರ ತಮ್ಮ ಲೇಖನದಲ್ಲಿ ಅವರ ಬಗ್ಗೆ ಉಲ್ಲೇಖಿಸಬೇಕು ಎಂದು ಸಲಹೆ ನೀಡಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಯದರ್ಶಿ ಜನಮೇಜಯ ಉಮರ್ಜಿ ಮಾತನಾಡಿದರು. ಲೋಕಹಿತ ಟ್ರಸ್ಟ್‌ ಕಾರ್ಯದರ್ಶಿ ಶ್ರೀಧರ ನಾಡಿಗೇರ ಸೇರಿದಂತೆ ಅನೇಕರಿದ್ದರು.