ನೀಲಗಾರರ ಶೈಲಿಯಲ್ಲಿ ಅಂಬೇಡ್ಕರ್‌ ಅವರ ಹಾಡುಗಳನ್ನು ಹಾಡಿ, ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ಕಲಾಮಂದಿರದ ಕಿಂದರಿಜೋಗಿ ಆವರಣದಲ್ಲಿ ನಡೆದ ಜನಪದೋತ್ಸವದಲ್ಲಿ ಇದೇ ಮೊದಲ ಬಾರಿಗೆ ಬಾಬಾ ಸಾಹೇಬರ ಜೀವನ ಚರಿತ್ರೆಯನ್ನು ನೀಲಗಾರರ ಹಾಡಿನ ರೂಪದಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವೆನಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ಬಾಬಾ ಸಾಹೇಬ್‌ ಸಮತೆಯೆಡೆಗೆ ನಡಿಗೆ ಹೆಸರಿನಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಕಳೆಗಟ್ಟುವಂತೆ ಗಾಯಕ ಮೈಸೂರು ಗುರುರಾಜ್ ಅವರು ನೀಲಗಾರರ ಪದದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಹಾಡಿ ಪ್ರೇಕ್ಷಕರ ಅಭಿಮಾನಕ್ಕೆ ಭಾಜನರಾದರು.

ನೀಲಗಾರರ ಶೈಲಿಯಲ್ಲಿ ಅಂಬೇಡ್ಕರ್‌ ಅವರ ಹಾಡುಗಳನ್ನು ಹಾಡಿ, ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ಕಲಾಮಂದಿರದ ಕಿಂದರಿಜೋಗಿ ಆವರಣದಲ್ಲಿ ನಡೆದ ಜನಪದೋತ್ಸವದಲ್ಲಿ ಇದೇ ಮೊದಲ ಬಾರಿಗೆ ಬಾಬಾ ಸಾಹೇಬರ ಜೀವನ ಚರಿತ್ರೆಯನ್ನು ನೀಲಗಾರರ ಹಾಡಿನ ರೂಪದಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವೆನಿಸಿತು.

ಬಾಬಾ ಸಾಹೇಬ ಇನ್ನೊಮ್ಮೆ ಬಾ ಬಾ.... ಹಾಡಿನೊಂದಿಗೆ ಪ್ರಾರಂಭಿಸಿದ ಅವರು ಅಂಬೇಡ್ಕರ್ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ, ದಾಂಪತ್ಯದ ಬದುಕು, ಸಂವಿಧಾನ ಬರೆದ ಪರಿಯ ಹಾಡುಗಳಿಗೆ ನೆರೆದಿದ್ದವರು ಸಂತುಷ್ಟರಾದರು.

ಭೀಮರು ಬಂದರು ಸಂವಿಧಾನ ಹೊತ್ತು ತಂದರು....ಸತ್ಯವಂತರ ಕಥೆಯ ಉತ್ತಮ ಉತ್ತಮರು ಕೇಳಿ ಹೀಗೆ ನಾನಾ ಗೀತೆಗಳ ಮೂಲಕ ಅಂಬೇಡ್ಕರ್ ಹೀಗೆ ಜೀವನ ಚರಿತ್ರೆ ತೆರೆದಿಟ್ಟರು.

ಇದಕ್ಕೂ ಮುನ್ನ ವೀರಣ್ಣ ಮತ್ತು ತಂಡ ಮೈಸೂರಿನ ಬಹುರೂಪಿ ನಾಟಕೋತ್ಸವ ಕುರಿತು ಗೀಗಿ ಪದ ಹಾಡಿ ಮೆಚ್ಚುಗೆ ಪಡೆದರು.

ಇದಕ್ಕೂ ಮುನ್ನ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬಸವರಾಜ್ ಮತ್ತು ತಂಡ ಪ್ರಸ್ತುತ ಪಡಿಸಿದ ನಂದಿ ಕೋಲು ನೃತ್ಯ ಪ್ರದರ್ಶನ ಜನಪದ ಕಾರ್ಯಕ್ರಮಕ್ಕೆ ಹೊಸ ರಂಗು ನೀಡಿತು.

ಭೂಮಿಗೀತಾದಲ್ಲಿ ನಾಲ್ವಡಿ ಸೋಶಿಯಲ್‌ ಕಲ್ಚರಲ್‌ ಅಂಡ್‌ಎಜುಕೇಷನಲ್‌ ಟ್ರಸ್ಟ್‌ ತಂಡದ ಕಲಾವಿದರು, ರವಿಕಿರಣ್‌ಆರ್‌. ಬಳ್ಳಗೆರೆ ರಚನೆ, ದಿನೇಶ್‌ ಚಮ್ಮಾಳಿಗೆ ನಿರ್ದೇಶನದ ಆಳಿದ ಮಾಸ್ವಾಮಿಗಳು ನಾಟಕ ಪ್ರಸ್ತುತಪಡಿಸಿದರು.

ಕಿರುರಂಗ ಮಂದಿರದಲ್ಲಿ ಶಬ್ಧ್‌ ಥಿಯೇಟರ್‌ ಗ್ರೂಪ್‌ ವತಿಯಿಂದ ಸಚಿನ್‌ ಮಾಲ್ವಿ ರಚನೆ ಮತ್ತು ನಿರ್ದೇಶನದ ಶಿಫಾರ್‌ ಹಿಂದಿ ನಾಟಕ ಪ್ರದರ್ಶಿಸಲಾಯಿತು. ಕಲಾಮಂದಿರದಲ್ಲಿ ಉಜ್ಜೈನ್‌ ನ ಅಂಕೂರ್‌ ರಂಗಮಂಚ್‌ ಸಮಿತಿ ಕಲಾವಿದರು, ಇವಾನ್‌ ಕಾನ್‌ ರಚನೆ, ಹಫೀಜ್‌ ಖಾನ್‌ ನಿರ್ದೇಶನದ ಅಂಬೇಡ್ಕರ್‌ ಕ ಬಚ್ಚನ್‌ ನಾಟಕವನ್ನು ಅಮೋಘವಾಗಿ ಅಭಿನಯಿಸಿದರು.