ಸುತ್ತೂರಿನ ಜೆಎಸ್‌ಎಸ್ ಶಾಲೆ ಕಟ್ಟಡಗಳ ಸಂಕೀರ್ಣದ ಆವರಣದ ಮೈದಾನದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಜಾತಿ- ಮತ ಭೇದವಿಲ್ಲದೆ ಸರ್ವಧರ್ಮಗಳ ಜೋಡಿಗಳು ವಿವಾಹವಾದರು. ಪ.ಜಾತಿಯ 84, ಪ. ಪಂಗಡದ 15, ಹಿಂದುಳಿದ ವರ್ಗದ 21, ವೀರಶೈವ-ಲಿಂಗಾಯತ 4 ಹಾಗೂ ಅಂತರ್ಜಾತಿಯ 11 ಜೋಡಿಯ ವಿವಾಹ ನೆರವೇರಿದ್ದು ವಿಶೇಷ.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಸಾಮೂಹಿಕ ವಿವಾಹದಲ್ಲಿ 135 ಜೋಡಿಗಳು ಹೊಸ ಬಾಳಿಗೆ ಕಾಲಿಟ್ಟರು.

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಈ ಬೃಹತ್‌ ಸಾಮೂಹಿಕ ವಿವಾಹದಲ್ಲಿ ನಾಡಿನ ಮೂಲೆ ಮೂಲೆಯ ಜೋಡಿಗಳು ಅಂಗವಿಕಲರು ಮತ್ತು ಅಂತರ್ಜಾತಿಯ ಜೋಡಿಗಳು ಕೂಡ ಸತಿಪತಿಗಳಾಗಿ ಸಾಮರಸ್ಯ ಮೆರೆದರು.

ಮಠಾಧೀಶರು, ಗಣ್ಯರು, ಹರಗುರು ಚರಮೂರ್ತಿಗಳು ನವ ದಂಪತಿಗಳನ್ನು ಆಶೀರ್ವದಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ವಧು-ವರರ ಸಂಬಂಧಿಕರು ವಿವಾಹದಲ್ಲಿ ಪಾಲ್ಗೊಂಡು ನೂತನ ವಧು- ವರರನ್ನು ಆಶೀರ್ವದಿಸಿದರು.

ಸುತ್ತೂರಿನ ಜೆಎಸ್‌ಎಸ್ ಶಾಲೆ ಕಟ್ಟಡಗಳ ಸಂಕೀರ್ಣದ ಆವರಣದ ಮೈದಾನದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಜಾತಿ- ಮತ ಭೇದವಿಲ್ಲದೆ ಸರ್ವಧರ್ಮಗಳ ಜೋಡಿಗಳು ವಿವಾಹವಾದರು. ಪ.ಜಾತಿಯ 84, ಪ. ಪಂಗಡದ 15, ಹಿಂದುಳಿದ ವರ್ಗದ 21, ವೀರಶೈವ-ಲಿಂಗಾಯತ 4 ಹಾಗೂ ಅಂತರ್ಜಾತಿಯ 11 ಜೋಡಿಯ ವಿವಾಹ ನೆರವೇರಿದ್ದು ವಿಶೇಷ. ಇದರಲ್ಲಿ 3 ಅಂಗವಿಕಲ ಜೋಡಿ ಹಸೆಮಣೆ ಏರಿದರು ಮತ್ತು ಮೂರು ಜೋಡಿ ಮರು ವಿವಾಹವಾದರು.

ಸರಳ ಸಾಮೂಹಿಕ ವಿವಾಹ ಸಂದರ್ಭ ಹಲವು ಮಠಾಧೀಶರು ವಧು-ವರರಿಗೆ ಸುಖ ಸಂಸಾರಕ್ಕಾಗಿ ಕಿವಿಮಾತು ಹೇಳಿದರು.

ಪಡಗುರು ಮಠದ ಶ್ರೀಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಉತ್ಸವದ ಜೊತೆಗೆ ಸಾಮಾಜಿಕ ಸೇವೆಯ ಅನೇಕ ಕೆಲಸ ನಡೆಯುತ್ತಿದೆ. ಇಂದು 135ಕ್ಕೂ ಹೆಚ್ಚು ಜೋಡಿ ವಿವಾಹ ಆಗುತ್ತಿರುವುದು ಸಂತೋಷದ ಸಂಗತಿ ಎಂದರು.

ಮೊದಲಿಗೆ ವಧುವರರನ್ನು ಶಿವರಾತ್ರೀಶ್ವರ ಶಿವಯೋಗಿಗಳ ಗದ್ದುಗೆಯಿಂದ ಮದುವೆ ಮಂಟಪದವರೆಗೆ ಡೊಳ್ಳು ಕುಣಿತ, ಮಂಗಳವಾದ್ಯ, ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ನೂತನ ವಧು ವರರನ್ನು ಕರೆತರಲಾಯಿತು.

ಹಲವು ಗಣ್ಯರು ಕೊಡುಗೆಯಾಗಿ ನೀಡಿರುವ ಸೀರೆ, ಕುಪ್ಪಸ, ಮಾಂಗಲ್ಯ, ಕಾಲುಂಗುರ, ಪಂಚೆ, ವಲ್ಲಿ, ಶರ್ಟ್ ಹಾಗೂ ವಿವಾಹಕ್ಕೆ ಪೂರಕ ಪರಿಕರಗಳನ್ನು ವಿತರಿಸಲಾಯಿತು. ಶ್ರೀಮಠದ ಪ್ರಧಾನ ಅರ್ಚಕ ವಿದ್ವಾನ್ ಮಲ್ಲಣ್ಣ ನೇತೃತ್ವದಲ್ಲಿ ವಿವಾಹ ವಿಧಿವಿಧಾನ ನೆರವೇರಿಸಿ ಮಂತ್ರ ಪಠಿಸಲಾಯಿತು.

ಬಳಿಕ ಮಂಗಳವಾದ್ಯ, ಗಟ್ಟಿಮೇಳ ಮೊಳಗುತ್ತಿದ್ದಂತೆ ಏಕಕಾಲದಲ್ಲಿ ಮಾಂಗಲ್ಯ ಧಾರಣೆಯೂ ನೆರವೇರಿತು.

ಗಣ್ಯರಿಂದ ಶುಭ ಹಾರೈಕೆ:

ಈ ವೇಳೆ ಪಾಲ್ಗೊಂಡಿದ್ದ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಜೋಡಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಧುವಿಗೆ ವರ ಕಾಲುಂಗುರ ತೊಡಿಸಿದ ನಂತರ ಬಾಗಿನ ಅರ್ಪಿಸಿದರು. ಅರಿಶಿಣ, ಕುಂಕುಮ, ತಾಂಬೂಲ ನೀಡಲಾಯಿತು. ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಡಗೂರು ಅಡವಿಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ಮೈಸೂರು ಬಿಷಪ್.ಫ್ರಾನ್ಸಿಸ್ ಸೆರಾವ್, ತಿರುವನಂತಪುರಂನ ಬಿಷಪ್ ಡಾ. ಗೇಬ್ರಿಯಲ್ ಮಾರ್ ಗ್ರೆಗೋರಿಯಸ್, ಯು ಎಸ್ ಎ ಬಾಸ್ಟನ್ ಕನ್ಸಲ್ಟಿಂಗ್ ಹಿರಿಯ ನಿರ್ದೇಶಕ ರಾಜಣ್ಣ ಹೆಗ್ಗಡಳ್ಳಿ ಇದ್ದರು.