ಸಾರಾಂಶ
ಶಿಗ್ಗಾಂವಿ: ಅಂಬಿಗ ಬೆಸ್ತ (ಗಂಗಾಮತ) ಸಮಾಜಕ್ಕೆ ಎಸ್.ಟಿ. ಸೌಲಭ್ಯವು ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುವ ಮೂಲಕ ತನ್ನ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ಅಜೀವ ಸುಧಾರಣೆಗೆ ಸಹಾಯವಾಗುತ್ತದೆ ಎಂದು ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಹೇಳಿದರು.ತಾಲೂಕಿನ ಕುನ್ನೂರ ಗ್ರಾಮದ ಚೌಡಯ್ಯನ ದೇವಸ್ಥಾನದಲ್ಲಿ ನಡೆದ ಅಂಬಿಗ ಬೆಸ್ತ ಸಮಾಜದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೆಸ್ತ ಸಮಾಜವು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತುಳಿತಕ್ಕೊಳಗಾಗಿದ್ದು ಸಮುದಾಯದ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಸರ್ಕಾರಗಳಿಗೆ ತಮ್ಮ ಹಕ್ಕನು ಕೇಳಲು ಮುಂದಾಗಬೇಕು. ಎಸ್.ಟಿ. ಸೌಲಭ್ಯ ಪಡೆಯುವುದರಿಂದ ಸಮುದಾಯದ ಸಾಂಸ್ಕೃತಿಕ ಗೌರವ ಹೆಚ್ಚಿಸಿಕೊಂಡು ಮಾನವ ಸಾಮರ್ಥ್ಯ ವೃದ್ಧಿಸಿಕೊಳ್ಳಲು ನೇರ ಕೊಡುಗೆಯಾಗುವ ಮೂಲಕ ಸರಿಯಾದ ಅನುಷ್ಠಾನದಿಂದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಅದಕ್ಕಾಗಿ ಸರ್ಕಾರವನ್ನು ಎಚ್ಚರಿಸಲು ಸಾಮಾಜಿಕ ಸಂಸ್ಥೆಗಳು, ಇತರ ಸಮಾಜದ ಮುಖಂಡರು ಕೈಜೋಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡ ಮರ್ತೆಮ್ಮಪ್ಪ ಮತ್ತಿಗಟ್ಟಿ ಮಾತನಾಡಿ, ತಾಲೂಕಿನಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಯಾಗಬೇಕು, ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ಕಲ್ಯಾಣ ಮಂಟಪದ ಅವಶ್ಯಕತೆ ಇದೆ. ತಾಲೂಕಿನ ಸಮಾಜ ಬಾಂಧವರು ಎಸ್.ಟಿ. ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಗಟ್ಟಿಯಾಗಿ ನಿಂತು ಸರ್ಕಾರದ ಕಣ್ಣು ತೆರೆಸಿ ಸಹಕರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮೈಲಾರಪ್ಪ ಇಂದೂರ, ನಿಂಗಣ್ಣ ಹೊಸಪೇಟಿ, ನಾಗರಾಜ ನಾಡಿಗೇರ, ಮಂಜು ಬಾರ್ಕಿ, ರಾಮಪ್ಪ ಮತ್ತಿಗಟ್ಟಿ, ಲಕ್ಷ್ಮಣ ಸುಣಗಾರ, ವೀರಭದ್ರಪ್ಪ ಶ್ಯಾಡಂಬಿ, ಈರಪ್ಪ ಮಣಕಟ್ಟಿ, ಈರಪ್ಪ ಗೋಣಿ, ಸೋಮಣ್ಣ ಮುದಕಪ್ಪನವರ, ಯಲ್ಲಪ್ಪ ನವಲೂರ, ರೇಣುಕಾ ಬಾರ್ಕಿ, ಲಕ್ಷ್ಮಿ ಸುಣಗಾರ, ದ್ರಾಕ್ಷಾಯಣಿ ಮಣಕಟ್ಟಿ, ಲಲಿತವ್ವ ಇತರರಿದ್ದರು.