ಸಾರಾಂಶ
ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾ: ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ಪ್ರಸಕ್ತ ಸಾಲಿನ ೨೦೨೫-೨೬ನೇ ಸಾಲಿಗೆ ನಡೆಯಬೇಕಿದ್ದ ಚುನಾವಣೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.ಟಿಎಪಿಸಿಎಂಎಸ್‌ನ ''ಎ'' ವರ್ಗದ ೭ ಸಾಮಾನ್ಯ, ''ಸಿ'' ವರ್ಗದಿಂದ ೭ ಸೇರಿ ಒಟ್ಟು ೧೪ ಸ್ಥಾನಗಳಿಗೆ ಅ. ೧೨ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಪೂರ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಹಕಾರ ಸಂಘಗಳ ಕಾಯ್ದೆ ೧೯೫೯ರ ೧೩ (ಡಿ) ನಿಯಮ ಪಾಲನೆ ಮಾಡದ ಕಾರಣ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಟಿಎಪಿಸಿಎಂಎಸ್‌ನಲ್ಲಿ ೨೧ ಸಹಕಾರ ಸಂಘಗಳು ಷೇರುದಾರ ಸಂಘಗಳಾಗಿವೆ. ಅದರಲ್ಲಿ ರಾಜಕೀಯ ದುರುದ್ದೇಶದಿಂದ ಕೇವಲ ೧೬ ಸಂಘಗಳನ್ನು ಮಾತ್ರ ಮಾನ್ಯ ಮಾಡಲಾಗಿದ್ದು, ಇನ್ನು ಯಲಬುರ್ಗಾ ತಾಲೂಕಿನ ತಾಳಕೇರಿ, ಹಿರೇವಂಕಲಕುಂಟಾ, ಬಂಡಿ ಹಾಗೂ ಕುಕನೂರು ತಾಲೂಕಿನ ಚಿಕೇನಕೊಪ್ಪ, ತಳಕಲ್ ಪಿಎಸಿಎಸ್ ಸೇರಿ ೫ ಸಂಘಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿಯಮ ಪಾಲನೆಯಾಗದ ಕಾರಣ ಚುನಾವಣೆ ತಾತ್ಕಾಲಿಕ ತಡೆ ಹಿಡಿಯುವಂತೆ ಕುಕನೂರು ತಾಲೂಕಿನ ಚಿಕೇನಕೊಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭೀಮರಡ್ಡಿ ಶ್ಯಾಡ್ಲಗೇರಿ ಹಾಗೂ ತಳಕಲ್ ಕೃಷಿ ಪತ್ತಿನ ಸಹಕಾರ ಸಂಘದ ಚಂದ್ರಶೇಖರಯ್ಯ ಚಂಡೂರ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಅವರ ಅರ್ಜಿ ಕೂಲಂಕಷವಾಗಿ ಪರಿಶೀಲಿಸಿ, ಸಹಕಾರ ಸಂಘಗಳ ಉಪ ನಿಬಂಧಕರು ಸದ್ಯ ತಾತ್ಕಾಲಿಕವಾಗಿ ಚುನಾವಣೆ ಮುಂದೂಡಿದ್ದಾರೆ.
ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಗೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು ಡೆಲಿಗೆಟ್ (ಪ್ರತಿನಿಧಿ) ಆಯ್ಕೆ ಮಾಡುವಲ್ಲಿ ಸಹಕಾರ ಸಂಘಗಳ ಕಾಯ್ದೆ ೧೯೫೯ರ ೧೪(ಡಿ) ನಿಯಮ ಪಾಲನೆಯಾಗಿಲ್ಲ. ಪಿಎಸಿಎಸ್ ಸಂಘಗಳಿಂದ ಡೆಲಿಗೆಟ್ ಆಯ್ಕೆಗೆ ಸಂಬಂಧಿಸಿದಂತೆ ಕಲ್ಲೂರು ಮತ್ತು ಬೇವೂರು ಪಿಎಸಿಎಸ್ ಸಂಘಗಳ ನಿರ್ದೇಶಕರು ತಮ್ಮ ಸಂಘದಿಂದ ಖೊಟ್ಟಿ ಸಹಿ ಮಾಡಿ ಡೆಲಿಗೆಟ್ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಬೇವೂರು ಹಾಗೂ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಚುನಾವಣೆ ಸಮಯದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವ ಇರುವುದರಿಂದ ಚುನಾವಣಾ ಪ್ರಕ್ರಿಯೆಯನ್ನು ತತ್‌ಕ್ಷಣವೇ ಮುಂದೂಡಿದ್ದು, ಮುಂದೆ ಯಾವ ತಿರುವ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.ಈ ಹಿಂದೆ ಕುಕನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಫಲಿತಾಂಶದ ಸಮಯದಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದು ಫಲಿತಾಂಶ ತಡೆಹಿಡಿಯಲಾಗಿತ್ತು. ಇದು ಕೂಡ ಕೋರ್ಟ್ ಮೆಟ್ಟಿಲೇರಿತ್ತು. ಇದೇ ಅ. ೯ರಂದು ಫಲಿತಾಂಶ ಹೊರ ಬೀಳಲಿದೆ.ಯಲಬುರ್ಗಾ ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕೆ ಸಹಕಾರ ಸಂಘಗಳನ್ನು ಬಲಿ ಕೊಡುತ್ತಿದ್ದಾರೆ. ವಾಮಮಾರ್ಗದಿಂದ ಅಧಿಕಾರ ಹಿಡಿಯಬೇಕು ಎನ್ನುವ ದುರುದ್ದೇಶ ಫಲಿಸುವುದಿಲ್ಲ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅರ್ಹ ಸಂಘಗಳನ್ನು ಅನರ್ಹ ಮಾಡಿರುವುದು ಸಹಕಾರ ಸಂಘಗಳ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನ ಎಂದು ಚಿಕೇನಕೊಪ್ಪ ಪಿಎಸಿಎಸ್ ಅಧ್ಯಕ್ಷ ಭೀಮರಡ್ಡಿ ಶ್ಯಾಡ್ಲಗೇರಿ ಹೇಳಿದರು.