ಸಾರಾಂಶ
ಕೊಪ್ಪಳ: ಒಳಮೀಸಲಾತಿ ವರ್ಗೀಕರಣ ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಜಿಲ್ಲಾ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಮಾಡಿದ್ದು, ಅದರಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹಿಂದುಳಿವಿಕೆ ಆಧಾರದ ಮೇಲೆ ನೇರ ನೇಮಕಾತಿ ಸಂದರ್ಭದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳು ಪ್ರವರ್ಗ ಎ ಪ್ರವರ್ಗ ಬಿ ದಲ್ಲಿ ಸೌಲಭ್ಯ ಪಡೆಯಬಹುದು ಎಂದು ಹೇಳಲಾಗಿದೆ. ಇದರಿಂದ ಮಾದಿಗ ಸಮುದಾಯಕ್ಕೆ ಸಂಪೂರ್ಣ ಅನ್ಯಾಯವಾಗುವ ರೀತಿಯಲ್ಲಿ ಇದೆ. ಇದು ಅವೈಜ್ಞಾನಿಕ, ಮಾದಿಗ ಸಮುದಾಯಕ್ಕೆ ಅನ್ಯಾಯವಾಗುವ ಸಂಪೂರ್ಣ ಲಕ್ಷಣಗಳಿವೆ ಎಂದು ಮನವಿಯಲ್ಲಿ ಹೇಳಲಾಗಿದೆ.ಪಕ್ಕದ ತೆಲಂಗಾಣ ರಾಜ್ಯದಲ್ಲಿ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ರಾಜ್ಯ ಸರ್ಕಾರದ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಒಳಮೀಸಲಾತಿ ನೀಡಿದ್ದಾರೆ. ಹಾಗಾಗಿ ರಾಜಕೀಯ ಮೀಸಲಾತಿ ಪರಿಗಣಿಸಿ ಕರ್ನಾಟಕ ರಾಜ್ಯದಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಮರ್ಪಕವಾಗಿ ಒಳಮೀಸಲಾತಿ ಪಾಲನೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಹಾಗೂ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿ ಮಾಡಿಕೊಳ್ಳುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಮೀನಮೇಷ ಎಣಿಸುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತೆ ಸುಕಾ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ೬, ೬, ೫ರ ವರ್ಗೀಕರಣದ ಸೂತ್ರವನ್ನು ಮರುಪರಿಶೀಲನೆ ಮಾಡಬೇಕು. ಎಲ್ಲ ೧೦೧ ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಪ್ರಮುಖರಾದ ಗಣೇಶ ಹೊರತಟ್ನಾಳ್, ಸಿದ್ದಪ್ಪ ಬೇಳೂರು, ನಾಗಲಿಂಗ ಮಾಳೆಕೊಪ್ಪ, ಸಿದ್ದು ಮಣ್ಣಿನವರ್, ಮಾರುತಿ ಬಿಕನಹಳ್ಳಿ, ಮಂಜುನಾಥ ಮುಸಲಾಪುರ, ಸ್ವಾಮಿ ಹಾಲವರ್ತಿ, ಫಕೀರಪ್ಪ ದೊಡ್ಡಮನಿ, ಶಿವಪ್ಪ ತಾಳ ಕನಕಾಪುರ ಇತರರಿದ್ದರು.