ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಬದುಕಿನಲ್ಲಿ ಧೈರ್ಯ ಮತ್ತು ಸಾಹಸಿಯ ಗುಣ ಇರುವ ವ್ಯಕ್ತಿ ಒಂದಲ್ಲ ಒಂದು ದಿನ ಸಾಧಕನಾಗುತ್ತಾನೆ ಎಂದು ಯೋಗ ಗುರು ಶ್ರೀ ನಿರಂಜನ ಸ್ವಾಮೀಜಿ ಹೇಳಿದರು. ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು 2024-25ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ನಿತ್ಯ ಧನಾತ್ಮಕವಾಗಿ ಚಿಂತನೆಗಳನ್ನ ಮಾಡಬೇಕೆ ಹೊರತು ಋಣಾತ್ಮಕ ವಿಚಾರಗಳಿಂದ ದೂರ ಇರಬೇಕು. ಸಾಧಿಸುವವನಿಗೆ ಬಡತನ ಮುಖ್ಯವಲ್ಲ ಆತ್ಮಸ್ಥೈರ್ಯ, ಸೃಜನಶೀಲತೆ, ಮುಂದಾಲೋಚನೆಯ ಗುಣಗಳು ಮೂಲವಾಗುತ್ತವೆ. ಎಲ್ಲ ಕ್ಷೇತ್ರಗಳ ಜ್ಞಾನ ಇಂದು ಅತ್ಯಂತ ಅವಶ್ಯಕವಾಗಿದೆ. ಕೇವಲ ನಾವು ಪುಸ್ತಕದ ಹುಳಗಳಾಗದೇ ಸರ್ವಜ್ಞರ ತರಹ ಎಲ್ಲ ಮಜಲುಗಳನ್ನು ಅಧ್ಯಯನ ಮಾಡುವಂಥವರಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಮಾತನಾಡಿ, ವಿದ್ಯಾರ್ಥಿಗಳ ಬದುಕು ಸುಂದರವಾಗಬೇಕಾದರೆ ಜ್ಞಾನದ ಅವಶ್ಯಕತೆ ಇದೆ. ವಿದ್ಯಾರ್ಥಿ ಜೀವನ ಒಮ್ಮೆ ಕಳೆದು ಹೋದರೆ ಅದು ಮತ್ತೊಮ್ಮೆ ಸಿಗಲು ಸಾಧ್ಯವಿಲ್ಲ. ಇಂದಿನ ಶಿಕ್ಷಣ ವ್ಯವಸ್ಥೆಯು ಕೂಡ ಅತ್ಯಂತ ಹದಗೆಟ್ಟಿದ್ದು ವಿಷಾದನೀಯ ಸಂಗತಿ. ಶಾಲಾ ಶಿಕ್ಷಣ ಕೇವಲ ನಮ್ಮ ಜ್ಞಾನವನ್ನು ವೃದ್ಧಿ ಮಾಡುತ್ತದೆ ಆದರೆ ಬದುಕಿನ ಶಿಕ್ಷಣ, ಮೌಲ್ಯ ಶಿಕ್ಷಣ, ಸಂಸ್ಕಾರ ಬರಿತ ಶಿಕ್ಷಣವು ನಮ್ಮ ಬದುಕನ್ನೇ ಶಿಖರದಂತೆ ಮೇಲೆರಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್, ಎನ್‌ಸಿಸಿ, ರೋವರ್ಸ್ ಆ್ಯಂಡ್ ರೆಂಜರ್ಸ್ ಘಟಕ, ರೆಡ್ ಕ್ರಾಸ್, ಭಾರತ ಸೇವಾದಳ ಸೇರಿದಂತೆ ಅನೇಕ ಘಟಕಗಳನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯಪ್ರವೃತ್ತರಾಗುತ್ತಿದ್ದೇವೆ. ಈ ಎಲ್ಲ ಘಟಕಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. 2024-25ನೇ ಸಾಲಿನ ಕಾರ್ಯಾಧ್ಯಕ್ಷ ಎಸ್.ಎ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಸಿದ್ದಮ್ಮ ಅಗ್ನಿ ವೇದಿಕೆ ಮೇಲಿದ್ದರು. ಈ ವೇಳೆ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ವಿವಿಧ ವಿಭಾಗಗಳ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು. ಉಪನ್ಯಾಸಕರಾದ ಬಿ.ಎಸ್ ಬಿರಾದಾರ, ಎಂ.ಎನ್.ಅಜ್ಜಪ್ಪ, ಎಫ್.ಎ. ಹಾಲಪ್ಪನವರ್, ಎಸ್.ಪಿ.ಬಿರಾದಾರ, ಸಿದ್ದಲಿಂಗ ಕಿಣಗಿ, ಎ.ಬಿ.ಪಾಟೀಲ, ಸತೀಶ್ ಬಸರಕೋಡ, ಎ.ಆರ್.ಸಿಂದಗಿಕರ, ಸುರೇಶ್ ಮಂಗೊಂಡಿ, ಗಂಗಾರಾಮ್ ಪವಾರ, ಜ್ಯೋತಿ ಚನ್ನೂರ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.