ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಅಮೆರಿಕಾದ ಸಾಗಿನಾವ ವಿಶ್ವವಿದ್ಯಾಲಯದ ಡೀನ್ , ಪ್ರೊಫೆಸರ್‌ಗಳು ಆಗಮಿಸಿ ಶಾಲೆಯಲ್ಲಿ ನಡೆಯುವ ತರಗತಿಗಳು, ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ವೀಕ್ಷಿಸಿದರು.ಅಮೆರಿಕಾದ ಸಾಗಿನಾವ ವಿಶ್ವವಿದ್ಯಾಲಯದೊಂದಿಗೆ ಎಸ್ ಟಿಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ವಿನಿಮಯ ಕಾರ್‍ಯಕ್ರಮಕ್ಕೆ ಒಪ್ಪಿಗೆಗೆ ಸಹಿ ಮಾಡಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಸಂಸ್ಥೆಯ ಕಾರ್ಯಕ್ರಮಗಳು, ಚಟುವಟಿಕೆಗಳಲ್ಲಿ ಪಾಲ್ಗೊಂಡರು.
ಸಾಗಿನಾವ ವಿಶ್ವವಿದ್ಯಾಲಯದ ಡೀನ್ , ಪ್ರೊಫೆಸರ್‌ಗಳು ಎಸ್ಟಿಜಿ ಸಂಸ್ಥೆಯ ಶಾಲೆಯ ಗ್ರಂಥಾಲಯ, ವಿಜ್ಞಾನ , ಗಣಿತ, ಕಂಪ್ಯೂಟರ್ ಪ್ರಯೋಗಾಲಯ ವೀಕ್ಷಿಸುವ ಜೊತೆಗೆ ಸಹಪಠ್ಯ ಚಟುವಟಿಕೆಗಳಾದ ಈಜು, ಕರಾಟೆ, ಡ್ರಾಮಾ, ಸಂಗೀತ, ನೃತ್ಯ ಮುಂತಾದವುಗಳನ್ನು ವೀಕ್ಷಿಸಿದರು. ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ತರಗತಿಗಳಿಗೆ ಭೇಟಿ ನೀಡಿ ಶಿಕ್ಷಕರ ಬೋಧನಾ ವಿಧಾನವನ್ನು ವೀಕ್ಷಿಸಿ ಶಿಕ್ಷಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳೊಂದಿಗೆ ಕಲಿಕೆ ಬಗ್ಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸಹ ಅಮೆರಿಕಾ ಶಿಕ್ಷಣ ಪದ್ಧತಿ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಅಂತಾರಾಷ್ಟ್ರೀಯ ಶಿಕ್ಷಣ ಪದ್ಧತಿ ಬಗ್ಗೆ ಅರಿವು ಮೂಡಿಸಿಕೊಂಡರು. ನಂತರ ಶಿಕ್ಷಕರೊಂದಿಗೆ ಸಂವಾದ ನಡೆಸಿದರು, ಬಳಿಕ ಎಸ್‌ಟಿಜಿ ಪ್ರಥಮ ದರ್ಜೆಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿಗೂ ಭೇಟಿ ನೀಡಿ ತರಗತಿ ವೀಕ್ಷಣೆ ಮಾಡಿ ಮಕ್ಕಳು ಹಾಗೂ ಉಪನ್ಯಾಸಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.
ಎಸ್‌ಟಿಜಿ ಶಾಲೆಯು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿತವಾಗಿ ಕಲಿಕೆಗೆ ಪೂರಕವಾದ ಉತ್ತಮ ಸೌಲಭ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಮೀಣ ಪ್ರದೇಶದಲ್ಲಿ ಇಂತಹ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಪಡೆದುಕೊಳ್ಳುವ ಜತೆಗೆ ತಮ್ಮ ಭವಿಷ್ಯ ಉಜ್ವಲವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಿರುವ ಸಂಸ್ಥೆ ಅಧ್ಯಕ್ಷರು, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಹಾಗೂ ಸಿಇಒ ಸಿ.ಪಿ.ಶಿವರಾಜು ಅವರ ಕಾರ್‍ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಯೊಂದಿಗೆ ನಮ್ಮ ಯೂನಿವರ್ಸಿಟಿ ‘ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ’ಅಡಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವುದು ಸಂತಸ ತಂದಿದೆ ಎಂದರು.ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ತನುಶ್ರೀ ಶಿವರಾಜು, ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಪ್ರಾಂಶುಪಾಲರಾದ ಮಾಚಮ್ಮ, ಮಾರುತಿ.ಟಿ., ನಿಶಾಂತ್.ಎ.ನಾಯ್ಡು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.