ರಂಭಾಪುರಿ ಗಂಗಾಧರ ಶ್ರೀಗಳು ಈ ಭಾಗದಲ್ಲಿ ಧರ್ಮಜಾಗೃತಿ ಮಾಡಿದ್ದು ಇತಿಹಾಸ. ಪುಲಿಗೆರೆ ಪಂಪನ ಕಾರ್ಯಕ್ಷೇತ್ರವಾಗಿದೆ.
ಲಕ್ಷ್ಮೇಶ್ವರ: ಜಿಲ್ಲೆ ಐತಿಹಾಸಿಕ ತಾಣಗಳ ಕೇಂದ್ರವಾಗಿದ್ದು, ಇಲ್ಲಿನ ಒಂದೊಂದು ಕಲ್ಲುಗಳು ಸಹ ಬಂಗಾರದ ಬೆಲೆಯನ್ನು ಹೊಂದಿವೆ. ಅದೇ ರೀತಿ ಪ್ರಾಚೀನ ದೇಗುಲ ರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಪ್ರವಾಸೊದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋಧ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ಸೋಮೇಶ್ವರ ದೇವಸ್ಥಾನದ ಉತ್ತರ ಮಹಾದ್ವಾರದ ಸಂರಕ್ಷಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ನಯಸೇನ, ದುರ್ಗಸಿಂಹ, ಚಾಮರಸ, ಅತ್ತಿಮಬ್ಬೆ, ಕುಮಾರವ್ಯಾಸ ಆದಿಕವಿ ಪಂಪ ಸೇರಿದಂತೆ ಅನೇಕರು ಈ ಭಾಗವನ್ನು ಶ್ರೀಮಂತಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿ ಎಂ.ಎಸ್. ಸುಂಕಾಪುರ, ಕೀರ್ತಿನಾಥ ಕುರ್ತಕೋಟಿ, ಸೋಮಶೇಖರ ಇಮ್ರಾಹಿಂಪುರ, ಹುಯಿಲಗೋಳ ನಾರಾಯಣರಾವ್ ಮಹಾನ್ ಸಾಹಿತಿಗಳು ನಮ್ಮ ಭಾಗದವರು ಎಂಬುದು ಹೆಮ್ಮೆಯ ಸಂಗತಿ ಎಂದರು.ರಂಭಾಪುರಿ ಗಂಗಾಧರ ಶ್ರೀಗಳು ಈ ಭಾಗದಲ್ಲಿ ಧರ್ಮಜಾಗೃತಿ ಮಾಡಿದ್ದು ಇತಿಹಾಸ. ಪುಲಿಗೆರೆ ಪಂಪನ ಕಾರ್ಯಕ್ಷೇತ್ರವಾಗಿದೆ. ಪಾಳಾ- ಬಾದಾಮಿ ರಸ್ತೆ ದೊಡ್ಡ ಇತಿಹಾಸ ಸಾರುವ ರಸ್ತೆಯಾಗಿದೆ. ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ ಭಾಗಗಳ ಇತಿಹಾಸದ ಘಟನಾವಳಿಯ ಪುಟಗಳು ಮುಚ್ಚಿ ಹೋಗಿವೆ. ಸೋಮೇಶ್ವರ ದೇವಾಲಯದ ಸುತ್ತಲೂ ಇರುವ ಮನೆಗಳ ಮಾಲೀಕರು ಮೂಲ ಸ್ಥಳವನ್ನು ದೇವಾಲಯದ ಭಾಗಕ್ಕೆ ಬಿಟ್ಟು ಕೊಟ್ಟಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯ. ಲಕ್ಕುಂಡಿ ಭಾಗದಲ್ಲಿ ದೊರೆತ ಚಿನ್ನವನ್ನು ಪ್ರಜ್ವಲ್ ರಿತ್ತಿ ಎಂಬ ಬಾಲಕ ಸರ್ಕಾರಕ್ಕೆ ಮರಳಿಸಿದ ಹೆಮ್ಮೆ ನಮ್ಮ ಜಿಲ್ಲೆಯದ್ದು. ಪುರಾತನ ದೇವಾಲಯ ಕಾಪಾಡುವ ಕೆಲಸ ಆಗಬೇಕಾಗಿದೆ ಎಂದರು.
ಈಗ ಸೋಮೇಶ್ವರ ಉತ್ತರ ಮಹಾದ್ವಾರದ ದುರಸ್ತಿ ಜತೆ, ಜಲನಿರೋಧಕ ಹೊದಿಕೆ ಹಾಕುವುದು, ದೇವಾಲಯದ ಚಾವಣಿ ದುರಸ್ತಿ ಸೇರಿದಂತೆ ಒಟ್ಟು ೧೨ ಕಾಮಗಾರಿ ಮಾಡಬೇಕಾಗಿದೆ. ಇದಕ್ಕಾಗಿ ₹೨.೪೦ ಕೋಟಿ ಅನುದಾನ ಸರ್ಕಾರ ಮಂಜೂರು ಮಾಡಿದೆ. ಪುನರ್ ನಿರ್ಮಾಣ ಕೆಲಸವು ಅಚ್ಚುಕಟ್ಟಾಗಿ ನೆರವೇರಿಸಬೇಕು. ಗುಣಮಟ್ಟದ ಕೆಲಸವಾಗಲಿ. ಸ್ಯಾಂಡ್ ಪ್ಲಾಸ್ಟರಿಂಗ್ ಅವಶ್ಯ ಇದ್ದರೆ ಮಾಡಿ ಎಂದು ಸೂಚನೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಚ್.ಕೆ. ಪಾಟೀಲ ಅವರು ಪ್ರವಾಸೋದ್ಯಮ ಸಚಿವರಾಗಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಅನೇಕ ಧಾರ್ಮಿಕ ಕ್ಷೇತ್ರಗಳು ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಇವರ ಆಡಳಿತದಲ್ಲಿ ಆಗಲಿ ಎಂದು ಹಾರೈಸಿದರು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಯುವ ಮುಖಂಡ ಆನಂದ ಗಡ್ಡದೇವರಮಠ, ಸೋಮೇಶ್ವರ ಭಕ್ತರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಅರ್ಚಕರ ಸಮಿತಿ ಅಧ್ಯಕ್ಷ ದಿಗಂಬರ ಪೂಜಾರ, ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಸುನೀಲ ಮಹಾಂತಶೆಟ್ಟರ, ಡಾ. ಬಸವರಾಜ ಬೊಮ್ಮನಳ್ಳಿ, ಎಸ್.ಪಿ. ಬಳಿಗಾರ, ಸಿದ್ದಲಿಂಗೇಶ ಪಾಟೀಲ, ವೀರಯ್ಯ ಮಠಪತಿ, ರಾಮಣ್ಣ ಲಮಾಣಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಎಂಜಿನಿಯರ್ ಸುವರ್ಣ ಕ್ಷೀರಸಾಗರ, ಗುತ್ತಿಗೆದಾರ ಎಸ್.ವಿ. ಹಿರೇಮಠ, ರಾಜು ಹೊಳಲಾಪುರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಚನ್ನಪ್ಪ ಜಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಗುಡಗೇರಿ, ಸೋಮಣ್ಣ ಕೆರಿಮನಿ ನಿರೂಪಿಸಿದರು.